ಭಾರತ ಸರ್ಕಾರದ ವಾರ್ತಾ ಶಾಖೆಯಿಂದ ಉಡುಪಿಯಲ್ಲಿ ಫೆಬ್ರವರಿ 24, 2026ರಂದು ಕಾರ್ಯಾಗಾರ ಆಯೋಜನೆ
ಭಾರತ ಸರ್ಕಾರದ ವಾರ್ತಾ ಶಾಖೆ (ಪಿಐಬಿ) ಬೆಂಗಳೂರು ಹಾಗೂ ಉಡುಪಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಇದೇ 24 ಮಂಗಳವಾರದಂದು ಉಡುಪಿಯ ಡಾ. ವಿ.ಎಸ್. ಆಚಾರ್ಯ ಸಭಾಂಗಣದಲ್ಲಿ ಕೇಂದ್ರ ಪುರಸ್ಕೃತ ಯೋಜನೆಗಳ ಕುರಿತು ಮಾಧ್ಯಮ ಪ್ರತಿನಿಧಿಗಳಿಗೆ ವಾರ್ತಾಲಾಪ ಕಾರ್ಯಾಗಾರ ಆಯೋಜಿಸಲಾಗಿದೆ.
ಅಂದು ಬೆಳಗ್ಗೆ 10:30 ಗಂಟೆಗೆ ಕಾರ್ಯಕ್ರಮದ ಉದ್ಘಾಟನೆ ನಡೆಯಲಿದ್ದು, ಉಡುಪಿ ಶಾಸಕರಾದ ಶ್ರೀ ಯಶಪಾಲ್ ಎ. ಸುವರ್ಣ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಉಡುಪಿ-ಚಿಕ್ಕಮಗಳೂರು ಲೋಕಸಭಾ ಸಂಸದರಾದ ಶ್ರೀ ಕೋಟ ಶ್ರೀನಿವಾಸ ಪೂಜಾರಿ, ಶಿವಮೊಗ್ಗ ಲೋಕಸಭಾ ಸಂಸದರಾದ ಶ್ರೀ ಬಿ.ವೈ. ರಾಘವೇಂದ್ರ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದು, ಜಿಲ್ಲೆಯ ಶಾಸಕರು ಹಾಗೂ ಜನಪ್ರತಿನಿಧಿಗಳು ಭಾಗಿಯಾಗಲಿದ್ದಾರೆ. ವಿಶೇಷ ಆಹ್ವಾನಿತರಾಗಿ ಭಾರತ ಸರ್ಕಾರದ ಕರ್ನಾಟಕ ವಾರ್ತಾ ಶಾಖೆಯ ಹೆಚ್ಚುವರಿ ಮಹಾನಿರ್ದೇಶಕರಾದ ಶ್ರೀ ಎಸ್.ಜಿ. ರವೀಂದ್ರ, ಉಡುಪಿ ಜಿಲ್ಲಾಧಿಕಾರಿ ಶ್ರೀಮತಿ ಸ್ವರೂಪ ಟಿ.ಕೆ., ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀ ಪ್ರತೀಕ್ ಬಾಯಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀ ಹರಿರಾಮ್ ಶಂಕರ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕರಾದ ಶ್ರೀ ಮಂಜುನಾಥ ಬಿ. ಅವರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ಕಾರ್ಯಾಗಾರದ ಮೊದಲ ಅಧಿವೇಷನದಲ್ಲಿ ವಿಕಸಿತ ಭಾರತ: ಜಿ ರಾಮ್ ಜಿ ಯೋಜನೆ ಕುರಿತು ಉಡುಪಿ ಜಿಲ್ಲಾ ಕಾರ್ಯಕ್ರಮ ಸಂಯೋಜಕರಾದ ಶ್ರೀ ವಿಜಯ್ ಶ್ಯಾಮ್ ಅವರು ಮಾತನಾಡಲಿದ್ದಾರೆ. ನೂತನ ಕಾರ್ಮಿಕ ಕಾನೂನುಗಳ ಕುರಿತು ಮಂಗಳೂರು ಇಎಸ್ಐಸಿ ಉಪ ಪ್ರಾದೇಶಿಕ ಕಚೇರಿಯ ಜಂಟಿ ನಿರ್ದೇಶಕರಾದ ಶ್ರೀ ವಿಜಯ್ ಆನಂದ್ ಎ.ಟಿ., ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಯೋಜನೆಗಳ ಅನುಷ್ಠಾನ ಕುರಿತು ಇಲಾಖೆಯ ಜಿಲ್ಲಾ ಕಾರ್ಯಕ್ರಮ ಅಭಿವೃದ್ಧಿ ಅಧಿಕಾರಿಗಳಾದ ಡಾ. ಪ್ರಶಾಂತ್ ಭಟ್, ಪಿಎಂ-ಸೂರ್ಯ ಘರ್ ಮುಫ್ತ ಬಿಜಲಿ ಯೋಜನೆ ಕುರಿತು ಮೆಸ್ಕಾಂನ ಅಧೀಕ್ಷಕ ಅಭಿಯಂತರರಾದ ಶ್ರೀ ನರಸಿಂಹ ಅವರು ಮಾಹಿತಿ ನೀಡಲಿದ್ದಾರೆ.
ಕಾರ್ಯಾಗಾರದ ಎರಡನೇ ಅಧಿವೇಶನದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಯೋಜನೆಗಳ ಅನುಷ್ಠಾನದ ಕುರಿತು ಇಲಾಖೆಯ ಉಪ ನಿರ್ದೇಶಕರಾದ ಶ್ರೀಮತಿ ಅನುರಾಧಾ ಹಾದಿಮನಿ ಮಾಹಿತಿ ಹಂಚಿಕೊಳ್ಳಲಿದ್ದಾರೆ. ಕೃಷಿ, ತೋಟಗಾರಿಕಾ ವಲಯದ ಯೋಜನೆಗಳ ಅನುಷ್ಠಾನದ ಕುರಿತು ಕೃಷಿ ಉಪ ನಿರ್ದೇಶಕರಾದ ಶ್ರೀ ಚಂದ್ರಶೇಖರ್ ನಾಯ್ಕ್, ಹಣಕಾಸು ಸುರಕ್ಷತೆ ಮತ್ತು ಆರ್ಥಿಕ ಸಬಲೀಕರಣದ ಕುರಿತು ಉಡುಪಿ ಲೀಡ್ ಬ್ಯಾಂಕ್ ವ್ಯವಸ್ಥಾಪಕರಾದ ಶ್ರೀ ಹರೀಶ್ ಜಿ. ಅವರು ಮಾಹಿತಿ ನೀಡಲಿದ್ದಾರೆ.
Source : PIB

