ಉದ್ಯಮ ಮತ್ತು ಶಿಕ್ಷಣ ತಜ್ಞರ ಕಾರ್ಯತಂತ್ರದ ಸಭೆಯಲ್ಲಿ ತಯಾರಿಕಾ ಎಂಜಿನಿಯರಿಂಗ್ ತಂತ್ರಜ್ಞಾನಕ್ಕಾಗಿ (ಎಂಇಟಿ) ಭಾರತದ ಎಐ ಆದ್ಯತೆಗಳನ್ನು ವಿವರಿಸಿದ ಕೇಂದ್ರ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್

0
2

ಜವಾಬ್ದಾರಿಯುತ ಮತ್ತು ವಿಸ್ತರಣೀಯ ಎಐ ಅಳವಡಿಕೆಯನ್ನು ಉತ್ತೇಜಿಸಲು ಎಂಜಿನಿಯರಿಂಗ್ ತಂತ್ರಜ್ಞಾನಕ್ಕಾಗಿ ಎಐ (ಎಐ-ಎಂಇಟಿ) ಕುರಿತ ಶ್ವೇತಪತ್ರದ ಪರಿಕಲ್ಪನೆಯನ್ನು ಸಚಿವರು ಬಿಡುಗಡೆ ಮಾಡಿದರು

ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಅವರು ಇಂದು ಉದ್ಯಮ ಮುಖಂಡರು, ಜಾಗತಿಕ ಶಿಕ್ಷಣ ತಜ್ಞರು, ನೀತಿ ನಿರೂಪಕರು ಮತ್ತು ತಂತ್ರಜ್ಞಾನ ತಜ್ಞರ ಕಾರ್ಯತಂತ್ರದ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಈ ಸಭೆಯಲ್ಲಿ ಅವರು ತಯಾರಿಕಾ ಎಂಜಿನಿಯರಿಂಗ್ ತಂತ್ರಜ್ಞಾನ (ಎಂಇಟಿ) ಪರಿಸರ ವ್ಯವಸ್ಥೆಯಲ್ಲಿ ಅಳವಡಿಕೆ, ಕೌಶಲ್ಯ ಅಭಿವೃದ್ಧಿ ಮತ್ತು ಸಮಗ್ರ ಬೆಳವಣಿಗೆಯ ಮೇಲೆ ಹೆಚ್ಚಿನ ಗಮನ ಕೇಂದ್ರೀಕರಿಸುವ ಮೂಲಕ ಭಾರತದ ಕೃತಕ ಬುದ್ಧಿಮತ್ತೆ (ಎಐ) ಆದ್ಯತೆಗಳನ್ನು ಸ್ಪಷ್ಟಪಡಿಸಿದರು.

ಇಂಡಿಯಾ ಎಐ ಇಂಪ್ಯಾಕ್ಟ್ ಶೃಂಗಸಭೆ 2026 ರಲ್ಲಿ ನಡೆದ ಈ ಸಭೆಯನ್ನು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ನೇತೃತ್ವದಲ್ಲಿ NAMTECH ಆಯೋಜಿಸಿತ್ತು. ಇದರಲ್ಲಿ ಮೆಸಾಚುಸೆಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎಂಐಟಿ), ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮದ್ರಾಸ್ (ಐಐಟಿ-ಎಂ) ಮತ್ತು ಇತರ ಪ್ರಮುಖ ವಿಶ್ವವಿದ್ಯಾಲಯಗಳ ಶಿಕ್ಷಣ ತಜ್ಞರು ಹಾಗೂ ಮೈಕ್ರೋಸಾಫ್ಟ್ ಇಂಡಿಯಾ, ಡೆಲ್ ಟೆಕ್ನಾಲಜೀಸ್, ಸಿಸ್ಕೋ ಇಂಡಿಯಾ, ಹಿತಾಚಿ ಇಂಡಿಯಾ, ಟಾಟಾ ಎಲೆಕ್ಟ್ರಾನಿಕ್ಸ್, ರಾಕ್‌ವೆಲ್ ಆಟೊಮೇಷನ್, ಪಾಲೊ ಆಲ್ಟೊ ನೆಟ್‌ವರ್ಕ್ಸ್, ಪೇಪಾಲ್ ಮತ್ತು ಇಂಟೆಲ್ ಸೇರಿದಂತೆ ವಿವಿಧ ಉದ್ಯಮಗಳ ಉನ್ನತ ಅಧಿಕಾರಿಗಳು ಭಾಗವಹಿಸಿದ್ದರು.

ಪ್ರಮುಖ ಉದ್ಯಮ ಮತ್ತು ಶೈಕ್ಷಣಿಕ ನಾಯಕರನ್ನು ಒಳಗೊಂಡ ಉದ್ಯಮ-ಶೈಕ್ಷಣಿಕ-ಸರ್ಕಾರದ ನಡುವಿನ ಈ ಚರ್ಚೆಯು, ವಿಕಸಿತ ಭಾರತ @2047ರ ರಾಷ್ಟ್ರೀಯ ದೃಷ್ಟಿಕೋನಕ್ಕೆ ಅನುಗುಣವಾಗಿ ಭಾರತದ ಕೈಗಾರಿಕಾ ವಲಯಗಳಲ್ಲಿ ಉತ್ಪಾದಕತೆ, ಸ್ಪರ್ಧಾತ್ಮಕತೆ ಮತ್ತು ನಾವೀನ್ಯತೆಗೆ ಎಐ ಒಂದು ಮೂಲಭೂತ ಚಾಲಕವಾಗಿದೆ ಎಂದು ಎತ್ತಿ ತೋರಿಸಿತು.

ಈ ಸಭೆಯು ಮೇ 2025ರಲ್ಲಿ ಭಾರತ ಮಂಟಪದಲ್ಲಿ ನಡೆದ ಉದ್ಯಮ-ಶಿಕ್ಷಣ ತಜ್ಞರ ದುಂಡುಮೇಜಿನ ಸಭೆಯನ್ನು ಆಧರಿಸಿದೆ. ಆ ಸಭೆಯು ಭಾರತದ ಕೈಗಾರಿಕಾ ರೂಪಾಂತರವನ್ನು ಸಕ್ರಿಯಗೊಳಿಸಲು ಸಾಮೂಹಿಕ ಕ್ರಮದ ಅಗತ್ಯವನ್ನು ಒತ್ತಿಹೇಳಿತ್ತು. ಅದರ ಪರಿಣಾಮವಾಗಿ, ಉದ್ಯಮ, ಶಿಕ್ಷಣ ಸಂಸ್ಥೆಗಳು ಮತ್ತು ಸರ್ಕಾರವನ್ನು ಹಂಚಿಕೆಯ ಆಡಳಿತ ಮತ್ತು ಅನುಷ್ಠಾನ ಮಾದರಿಯಲ್ಲಿ ಒಟ್ಟುಗೂಡಿಸಲು ಮತ್ತು ಉತ್ಪಾದನೆಯನ್ನು ಭಾರತದ ವೇಗವರ್ಧಿತ ಬೆಳವಣಿಗೆ ಮತ್ತು ಇಂಗಾಲದ ಹೊರಸೂಸುವಿಕೆ ಕಡಿತದ ಕಾರ್ಯಸೂಚಿಯ ಕೇಂದ್ರಬಿಂದುವಾಗಿಸಲು ತಯಾರಿಕಾ ಎಂಜಿನಿಯರಿಂಗ್‌ ತಂತ್ರಜ್ಞಾನ (ಎಂಇಟಿ) ವೇದಿಕೆಯನ್ನು NAMTECH ನಿಂದ ಆಯೋಜಿಸಲಾಗುತ್ತಿದೆ ಮತ್ತು ವೇಗವರ್ಧಿತಗೊಳಿಸಲಾಗುತ್ತಿದೆ.

ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಅವರಿಂದ ತಯಾರಿಕಾ ಎಂಜಿನಿಯರಿಂಗ್‌ ತಂತ್ರಜ್ಞಾನಕ್ಕಾಗಿ ಎಐ (ಎಐ-ಎಂಇಟಿ) ಕುರಿತ ಶ್ವೇತಪತ್ರದ ಪರಿಕಲ್ಪನೆಯ ಬಿಡುಗಡೆಗೂ ಈ ಕಾರ್ಯಕ್ರಮ ಸಾಕ್ಷಿಯಾಯಿತು. ಈ ಶ್ವೇತಪತ್ರದ ಪರಿಕಲ್ಪನೆಯು ಉತ್ಪಾದಕತೆ, ಸುಸ್ಥಿರತೆ ಮತ್ತು ಜಾಗತಿಕ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸಲು ತಯಾರಿಕೆ ಮತ್ತು ಅದಕ್ಕೆ ಸಂಬಂಧಿಸಿದ ಮೌಲ್ಯ ಸರಪಳಿಗಳಾದ್ಯಂತ ಎಐ ಅನ್ನು ಅಳವಡಿಸಲು ಕಾರ್ಯತಂತ್ರದ ಚೌಕಟ್ಟನ್ನು ಪ್ರಸ್ತುತಪಡಿಸುತ್ತದೆ. ಇದು ಭಾರತದ ಎಂಇಟಿ ಪರಿಸರ ವ್ಯವಸ್ಥೆಯಾದ್ಯಂತ ಎಐ ಅನ್ನು ಅಳವಡಿಸಲು ಉದ್ಯಮ, ಶಿಕ್ಷಣ ತಜ್ಞರು ಮತ್ತು ನೀತಿ ನಿರೂಪಕರಿಗಾಗಿ ಸಂಯೋಜಿತ ಮಾರ್ಗಗಳನ್ನು ರೂಪಿಸುವ ಪ್ರಕ್ರಿಯೆಯನ್ನು ವಿವರಿಸುತ್ತದೆ.

ಕಾರ್ಯಕ್ರಮದಲ್ಲಿ ಮಾತನಾಡಿದ ಶ್ರೀ ಅಶ್ವಿನಿ ವೈಷ್ಣವ್, ವಿಕಸಿತ ಭಾರತದತ್ತ ಭಾರತದ ಪಯಣದಲ್ಲಿ ಕೃತಕ ಬುದ್ಧಿಮತ್ತೆಯು ಒಂದು ಮೂಲಭೂತ ಸ್ತಂಭವಾಗಿದೆ. ತಯಾರಿಕಾ ಎಂಜಿನಿಯರಿಂಗ್ ತಂತ್ರಜ್ಞಾನದಾದ್ಯಂತ ಎಐ ಅನ್ನು ಸಂಯೋಜಿಸುವ ಮೂಲಕ ನಾವು ಉತ್ಪಾದಕತೆಯನ್ನು ಹೆಚ್ಚಿಸಬಹುದು, ಸ್ಪರ್ಧಾತ್ಮಕತೆಯನ್ನು ಬಲಪಡಿಸಬಹುದು ಮತ್ತು ನಾವೀನ್ಯತೆ ಹಾಗೂ ಉದ್ಯಮಶೀಲತೆಗೆ ಹೊಸ ಅವಕಾಶಗಳನ್ನು ತೆರೆಯಬಹುದು ಎಂದು ಹೇಳಿದರು. ನಮ್ಮ ಗಮನವು ಉದ್ಯಮಗಳು ಮತ್ತು ಎಂ ಎಸ್ ಎಂ ಇ ಗಳನ್ನು ಸಮಾನವಾಗಿ ಸಬಲೀಕರಣಗೊಳಿಸುವ ಸಮಗ್ರ ಎಐ ಪರಿಸರ ವ್ಯವಸ್ಥೆಯನ್ನು ನಿರ್ಮಿಸುವುದಾಗಿದೆ, ಜೊತೆಗೆ ಭಾರತದ ಕಾರ್ಯಪಡೆಯನ್ನು ಭವಿಷ್ಯಕ್ಕಾಗಿ ಸಿದ್ಧಪಡಿಸುವುದಾಗಿದೆ. ಎಐ-ಎಂಇಟಿ ಶ್ವೇತಪತ್ರದಂತಹ ಉಪಕ್ರಮಗಳು ತಾಂತ್ರಿಕ ಸಾಮರ್ಥ್ಯವನ್ನು ವಾಸ್ತವಿಕ ಫಲಿತಾಂಶಗಳಾಗಿ ಪರಿವರ್ತಿಸಲು ಅಗತ್ಯವಿರುವ ಸಹಯೋಗದ ಮತ್ತು ಮಿಷನ್-ಆಧಾರಿತ ವಿಧಾನವನ್ನು ಪ್ರತಿಫಲಿಸುತ್ತದೆ. ಈ ಹಂಚಿಕೆಯ ರಾಷ್ಟ್ರೀಯ ಉದ್ದೇಶದತ್ತ ಉದ್ಯಮ, ಶಿಕ್ಷಣ ತಜ್ಞರು ಮತ್ತು ನೀತಿ ನಿರೂಪಕರನ್ನು ಒಟ್ಟುಗೂಡಿಸುವಲ್ಲಿ NAMTECH ಮುನ್ನಡೆ ಸಾಧಿಸಿರುವುದಕ್ಕೆ ನನಗೆ ಸಂತೋಷವಿದೆ. ಭಾರತವು ನಿಖರ ಸಾಧನಗಳ ಪ್ರಮುಖ ತಯಾರಕನಾಗಿ ಹೊರಹೊಮ್ಮಲು ಅನುವು ಮಾಡಿಕೊಡುವ ಮುಂದಿನ ಹಂತದ ಪ್ರತಿಭೆಗಳನ್ನು ಅಭಿವೃದ್ಧಿಪಡಿಸಲು ಈ ಅವಕಾಶವನ್ನು ಬಳಸಿಕೊಳ್ಳಬೇಕೆಂದು ನಾನು NAMTECH ಗೆ ವಿನಂತಿಸುತ್ತೇನೆ ಎಂದು ಅವರು ಹೇಳಿದರು.

ಅಮೆರಿಕದ ಬೋಸ್ಟನ್‌ ನ ಮೆಸಾಚುಸೆಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎಂಐಟಿ) ಯ ಶೈಕ್ಷಣಿಕ ಪ್ರಗತಿಯ ಚಾನ್ಸೆಲರ್ ಪ್ರೊ. ಎರಿಕ್ ಗ್ರಿಮ್ಸನ್ ಅವರು ಮಾತನಾಡಿ, ಭಾರತದ ಎಐ  ಪ್ರಯಾಣದ ಮುಂದಿನ ಹಂತವು ಸಾಮರ್ಥ್ಯದಿಂದ ಅನ್ವಯಕ್ಕೆ ಚಲಿಸುವ ಅದರ ಸಾಮರ್ಥ್ಯದಿಂದ ವ್ಯಾಖ್ಯಾನಿಸಲ್ಪಡುತ್ತದೆ – ಅಂದರೆ ಉದ್ಯಮ, ದೊಡ್ಡ ಸಂಸ್ಥೆಗಳು ಮತ್ತು ಎಂ ಎಸ್ ಎಂ ಇ ಗಳಾದ್ಯಂತ ಎಐ ಅನ್ನು ಅಳವಡಿಸುವುದು, ಕೌಶಲ್ಯಗಳಲ್ಲಿ ಹೂಡಿಕೆ ಮಾಡುವುದು ಮತ್ತು ನಾವೀನ್ಯತೆಯು ಎಲ್ಲರನ್ನೂ ಒಳಗೊಂಡಿರುವುದನ್ನು ಖಚಿತಪಡಿಸಿಕೊಳ್ಳುವುದು. ಸಂಶೋಧನೆ ಮತ್ತು ತಂತ್ರಜ್ಞಾನವನ್ನು ನೈಜ ಪ್ರಪಂಚದ ಫಲಿತಾಂಶಗಳಾಗಿ ಪರಿವರ್ತಿಸುವ ವ್ಯವಸ್ಥೆಗಳನ್ನು ನಿರ್ಮಿಸಲು ಶಿಕ್ಷಣ ಸಂಸ್ಥೆಗಳು, ಉದ್ಯಮ ಮತ್ತು ಸರ್ಕಾರದ ನಡುವೆ ನಿರಂತರ ಸಹಯೋಗದ ಅಗತ್ಯವಿದೆ ಎಂದು ಹೇಳಿದರು.

ಮೈಕ್ರೋಸಾಫ್ಟ್ ಇಂಡಿಯಾದ ತಯಾರಿಕೆ ಮತ್ತು ಸಮೂಹಗಳ ಕಾರ್ಯನಿರ್ವಾಹಕ ನಿರ್ದೇಶಕ ಶ್ರೀ ಪ್ರವೀಣ್ ಪಂಚಾಗ್ನುಲ ಅವರು ಮಾತನಾಡಿ, ಭಾರತದ ಕೈಗಾರಿಕಾ ವಲಯಗಳಲ್ಲಿ ಎಐ ಪ್ರಭಾವವು ಅದರ ಬಳಕೆಯು ಕಾರ್ಖಾನೆಗಳ ತಳಮಟ್ಟದಲ್ಲಿ ಮತ್ತು ಸಂಕೀರ್ಣ ಎಂಜಿನಿಯರಿಂಗ್ ವ್ಯವಸ್ಥೆಗಳಲ್ಲಿ ಹೇಗೆ ನಿಯೋಜಿಸಲ್ಪಡುತ್ತದೆ ಎಂಬುದರ ಮೇಲೆ ನಿರ್ಧರಿಸಲ್ಪಡುತ್ತದೆ. ಸ್ಥಿತಿಸ್ಥಾಪಕ ಮತ್ತು ಜಾಗತಿಕವಾಗಿ ಸ್ಪರ್ಧಾತ್ಮಕ ಉತ್ಪಾದನಾ ಮೌಲ್ಯ ಸರಪಳಿಗಳನ್ನು ನಿರ್ಮಿಸಲು ಎಂ ಎಸ್ ಎಂ ಇ ಗಳಲ್ಲಿ ಎಐ ಅಳವಡಿಕೆಯನ್ನು ಸಕ್ರಿಯಗೊಳಿಸುವುದು ಮತ್ತು ಕಾರ್ಯಪಡೆಗೆ ಉದ್ದೇಶಿತ ಕೌಶಲ್ಯಗಳನ್ನು ನೀಡುವುದು ಅತ್ಯಗತ್ಯ ಎಂದು ಹೇಳಿದರು.

ಸಿಸ್ಕೋ ಇಂಡಿಯಾದ ಡಿಜಿಟಲ್ ಟ್ರಾನ್ಸ್‌ಫರ್ಮೇಷನ್‌ ನಿರ್ದೇಶಕ ಶ್ರೀ ವಿನೋದ್ ಕರುಮಾಂಪೋಯಿಲ್ ಮಾತನಾಡಿ, “ಆಧುನಿಕ ಉತ್ಪಾದನೆಯಲ್ಲಿ ಎಐ ಅವಿಭಾಜ್ಯ ಅಂಗವಾಗುತ್ತಿದ್ದಂತೆ, ಕಾರ್ಯಪಡೆಯಾದ್ಯಂತ ಬಲವಾದ ಅಪ್ಲಿಕೇಷನ್‌ -ಆಧಾರಿತ ಕೌಶಲ್ಯಗಳನ್ನು ನಿರ್ಮಿಸುವುದು ಅತ್ಯಗತ್ಯ. ಪ್ರತಿಭೆಗಳು ಜವಾಬ್ದಾರಿಯುತವಾಗಿ ಮತ್ತು ದೊಡ್ಡ ಮಟ್ಟದಲ್ಲಿ ಎಐ ಅನ್ನು ನಿಯೋಜಿಸಲು ಸಿದ್ಧರಾಗಿರುವುದನ್ನು ಖಚಿತಪಡಿಸಿಕೊಳ್ಳಲು ಉದ್ಯಮ ಮತ್ತು ಶಿಕ್ಷಣ ಸಂಸ್ಥೆಗಳ ನಡುವಿನ ನಿಕಟ ಸಹಯೋಗವು ಪ್ರಮುಖವಾಗಿದೆ ಎಂದು ತಿಳಿಸಿದರು.

ಪಾಲೊ ಆಲ್ಟೊ ನೆಟ್‌ವರ್ಕ್ಸ್‌ ನ ಎಂಡಿ ಮತ್ತು ಉಪಾಧ್ಯಕ್ಷರು (ಭಾರತ ಮತ್ತು ಸಾರ್ಕ್) ಶ್ರೀಮತಿ ಸ್ವಪ್ನಾ ಬಾಪಟ್ ಮಾತನಾಡಿ, ಸೈಬರ್ ಸುರಕ್ಷತೆ ಮತ್ತು ಐಟಿ ಪರಿಸರದಲ್ಲಿ, ಕಳಪೆಯಾಗಿ ವಿನ್ಯಾಸಗೊಳಿಸಲಾದ ಕಾರ್ಯಾಚರಣೆಯ ತಂತ್ರಜ್ಞಾನ ಗಮನಾರ್ಹ ಅಪಾಯವನ್ನುಂಟುಮಾಡುತ್ತದೆ ಎಂದು ಹೇಳಿದರು. ಸುರಕ್ಷಿತ, ಉದ್ಯಮ-ದರ್ಜೆಯ ನೆಟ್‌ವರ್ಕ್ ಅನ್ನು ವಿನ್ಯಾಸಗೊಳಿಸಲು ಮೂರು ನಿರ್ಣಾಯಕ ಅಂಶಗಳ ಅಗತ್ಯವಿದೆ. ಆಧುನಿಕ ಉತ್ಪಾದನೆಯಲ್ಲಿ ಎಐ ಅಡಿಗಲ್ಲಾಗುತ್ತಿದ್ದಂತೆ, ಕಾರ್ಯಪಡೆಯಾದ್ಯಂತ ಅಪ್ಲಿಕೇಷನ್‌ ಆಧಾರಿತ ಕೌಶಲ್ಯಗಳನ್ನು ನಿರ್ಮಿಸಲು ನಾವು ಆದ್ಯತೆ ನೀಡಬೇಕು. ವಿದ್ಯಾರ್ಥಿಗಳು ತಕ್ಷಣವೇ ಕೆಲಸಕ್ಕೆ ಸೇರಲು ಸಿದ್ಧರಿರುವುದನ್ನು ಖಚಿತಪಡಿಸಿಕೊಳ್ಳಲು ಶಾಲೆಗಳಿಗೆ ಆಧುನಿಕ ನೆಟ್‌ವರ್ಕ್ ಭದ್ರತಾ ತತ್ವಗಳನ್ನು ತರುವ ಮೂಲಕ ಶಿಕ್ಷಣ ಮತ್ತು ಉದ್ಯಮದ ನಡುವಿನ ಅಂತರವನ್ನು ಕಡಿಮೆ ಮಾಡುವುದು ನಮ್ಮ ಗುರಿಯಾಗಿದೆ ಎಂದು ಅವರು ಹೇಳಿದರು.

ರಾಕ್‌ವೆಲ್ ಆಟೊಮೇಷನ್‌ ನ ಭಾರತದ ವ್ಯವಸ್ಥಾಪಕ ನಿರ್ದೇಶಕ ಶ್ರೀ ದಿಲೀಪ್ ಸಾಹ್ನಿ ಮಾತನಾಡಿ, ಭಾರತದ ತಯಾರಿಕಾ ವಲಯಕ್ಕೆ, ಎಐ ಅನ್ನು ಕೈಗಾರಿಕಾ ಆಟೊಮೇಷನ್ ವ್ಯವಸ್ಥೆಗಳಲ್ಲಿ ಸಂಯೋಜಿಸಿದಾಗ ಮತ್ತು ಉತ್ಪಾದನಾ ಪರಿಸರಗಳಲ್ಲಿ ದೊಡ್ಡ ಮಟ್ಟದಲ್ಲಿ ನಿಯೋಜಿಸಿದಾಗ ಮಾತ್ರ ಅದರ ನಿಜವಾದ ಪ್ರಭಾವ ಕಂಡುಬರುತ್ತದೆ ಎಂದು ಹೇಳಿದರು. ಡಿಜಿಟಲ್ ನಾವೀನ್ಯತೆ ಮತ್ತು ಕಾರ್ಖಾನೆಯ ತಳಮಟ್ಟದ ಅನುಷ್ಠಾನದ ನಡುವಿನ ಅಂತರವನ್ನು ಹೋಗಲಾಡಿಸಲು ಉದ್ಯಮ, ಶಿಕ್ಷಣ ಸಂಸ್ಥೆಗಳು ಮತ್ತು ಸರ್ಕಾರದ ನಡುವೆ ಬಲವಾದ ಸಹಯೋಗದ ಅಗತ್ಯವಿದೆ. ಇಂತಹ ಉಪಕ್ರಮಗಳು ಅಳವಡಿಕೆಯನ್ನು ವೇಗಗೊಳಿಸಲು, ಕಾರ್ಯಪಡೆಯ ಸಾಮರ್ಥ್ಯವನ್ನು ಬಲಪಡಿಸಲು ಮತ್ತು ಭಾರತದ ಉತ್ಪಾದನಾ ಮೌಲ್ಯ ಸರಪಳಿಗಳ ಜಾಗತಿಕ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸಲು ಅಗತ್ಯವಿರುವ ಪರಿಸರ ವ್ಯವಸ್ಥೆಯನ್ನು ನಿರ್ಮಿಸುತ್ತವೆ ಎಂದು ಹೇಳಿದರು.

NAMTECH ನ ಕಾರ್ಯಾಚರಣೆ ಮಹಾನಿರ್ದೇಶಕ ಮತ್ತು ಸಿಇಒ ಡಾ. ಇಬ್ರಾಹಿಂ ಹಫೀಜುರ್ ರೆಹಮಾನ್ ಮಾತನಾಡಿ, ಶಿಕ್ಷಣವನ್ನು ನೈಜ ಪ್ರಪಂಚದ ಕೈಗಾರಿಕಾ ಸಂದರ್ಭಗಳಲ್ಲಿ ನೆಲೆಗೊಳಿಸುವ ಮೂಲಕ, ಅಪ್ಲಿಕೇಷನ್-ಆಧಾರಿತ ಕಲಿಕೆಯು ಪ್ರತಿಭೆಗಳನ್ನು ಮೊದಲ ದಿನದಿಂದಲೇ ಉತ್ಪಾದನಾ ಪರಿಸರದಲ್ಲಿ ಕೆಲಸ ಮಾಡಲು ಹೇಗೆ ಸಕ್ರಿಯಗೊಳಿಸುತ್ತದೆ ಎಂಬುದನ್ನು ತೋರಿಸಿಕೊಡುವುದು NAMTECH ನ ಗುರಿಯಾಗಿದೆ‌ ಎಂದರು. ಎಂಇಟಿ ವೇದಿಕೆ ಮತ್ತು ಉದ್ಯಮ ಹಾಗೂ ಶಿಕ್ಷಣ ಸಂಸ್ಥೆಗಳ ಪಾಲುದಾರಿಕೆಯ ಮೂಲಕ, ಈ ವಿಧಾನವು ಭಾರತದ ತಯಾರಿಕಾ ಎಂಜಿನಿಯರಿಂಗ್ ತಂತ್ರಜ್ಞಾನದ ಪರಿವರ್ತನೆಗಾಗಿ ಕಾರ್ಯಪಡೆಯನ್ನು ಸಿದ್ಧಪಡಿಸಲು ಬೇಕಾದ ವಿಸ್ತರಣೀಯ ಮಾದರಿಗಳನ್ನು ರೂಪಿಸಲು ಸಹಾಯ ಮಾಡುತ್ತದೆ ಎಂದು ಅವರು ಹೇಳಿದರು.

Source : PIB