ಗ್ರಾಮೀಣ ಆರ್ಥಿಕತೆಯಲ್ಲಿ ಹೊಸ ಚೈತನ್ಯ ತುಂಬಲು ಕಾನೂನು ಸುಧಾರಣೆಗಳು, ಸುಸ್ಥಿರತೆ, ಡೈರಿ ವಿಸ್ತರಣೆ, ಡಿಜಿಟಲೀಕರಣ, ಸಹಕಾರಿ ಬ್ಯಾಂಕಿಂಗ್ ಬಲಪಡಿಸುವಿಕೆ ಮತ್ತು ಸದಸ್ಯತ್ವ ವಿಸ್ತರಣೆಯ ಮೇಲೆ ಸಭೆಯು ಗಮನ ಕೇಂದ್ರೀಕರಿಸಲಿದೆ
ಮಂಥನ ಸಭೆಯ ಅವಧಿಯಲ್ಲಿ ಮಾನವ ಸಂಪನ್ಮೂಲ ಅಭಿವೃದ್ಧಿ ಮತ್ತು ಸಹಕಾರಿ ಯೋಜನೆಗಳ ಪರಿಣಾಮಕಾರಿ ಅನುಷ್ಠಾನದ ಕುರಿತು ಸಮಗ್ರ ಚರ್ಚೆಗಳು ನಡೆಯಲಿವೆ
ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ “ಸಹಕಾರ್ ಸೆ ಸಮೃದ್ಧಿ” ದೃಷ್ಟಿಕೋನದಿಂದ ಪ್ರೇರಿತರಾಗಿ ಮತ್ತು ಗೌರವಾನ್ವಿತ ಕೇಂದ್ರ ಗೃಹ ಹಾಗೂ ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರ ನೇತೃತ್ವದಲ್ಲಿ, ಸಹಕಾರ ವಲಯವನ್ನು ಹೆಚ್ಚು ಬಲಶಾಲಿ, ಪಾರದರ್ಶಕ ಮತ್ತು ಆಧುನಿಕವನ್ನಾಗಿ ಮಾಡಲು ಸಹಕಾರ ಸಚಿವಾಲಯವು ಇತ್ತೀಚಿನ ವರ್ಷಗಳಲ್ಲಿ ವ್ಯಾಪಕ ಶ್ರೇಣಿಯ ಮತ್ತು ರಚನಾತ್ಮಕ ಸುಧಾರಣೆಗಳನ್ನು ಕೈಗೊಂಡಿದೆ. ಸಹಕಾರಿ ಸಂಘಗಳನ್ನು ಕೇವಲ ಸಾಂಸ್ಥಿಕ ಘಟಕಗಳ ಬದಲಾಗಿ ಸದಸ್ಯ-ಕೇಂದ್ರಿತ, ಆದಾಯ-ಹೆಚ್ಚಿಸುವ ಮತ್ತು ಸ್ವಾವಲಂಬಿ ಆರ್ಥಿಕ ಘಟಕಗಳಾಗಿ ಪರಿವರ್ತಿಸುವ ಉದ್ದೇಶದೊಂದಿಗೆ, ಶ್ರೀ ಅಮಿತ್ ಶಾ ಅವರ ಅಧ್ಯಕ್ಷತೆಯಲ್ಲಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸಹಕಾರ ಸಚಿವರ ಉನ್ನತ ಮಟ್ಟದ ‘ಮಂಥನ’ ಸಭೆಯು 17 ಫೆಬ್ರವರಿ 2026 ರಂದು ಗುಜರಾತಿನ ಗಾಂಧಿನಗರದ ಮಹಾತ್ಮಾ ಮಂದಿರದಲ್ಲಿ ನಡೆಯಲಿದೆ.
ಈ ಸಭೆಯಲ್ಲಿ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸಹಕಾರ ಸಚಿವರು ಹಾಗೂ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ/ಪ್ರಧಾನ ಕಾರ್ಯದರ್ಶಿ/ಕಾರ್ಯದರ್ಶಿ ಶ್ರೇಣಿಯ ಅಧಿಕಾರಿಗಳು ಭಾಗವಹಿಸಲಿದ್ದಾರೆ. ಈ ವೇದಿಕೆಯು ಸಹಕಾರ ಸಚಿವಾಲಯದ ಪ್ರಮುಖ ಉಪಕ್ರಮಗಳ ಸಮಗ್ರ ಪರಾಮರ್ಶೆ, ಇದುವರೆಗೆ ಸಾಧಿಸಿದ ಪ್ರಗತಿಯ ಮೌಲ್ಯಮಾಪನ, ರಾಜ್ಯಗಳ ಉತ್ತಮ ಅಭ್ಯಾಸಗಳು ಮತ್ತು ಅನುಭವಗಳ ವಿನಿಮಯ ಹಾಗೂ ಭವಿಷ್ಯಕ್ಕಾಗಿ ಸಮನ್ವಯದ ಮಾರ್ಗಸೂಚಿಯನ್ನು ಸಿದ್ಧಪಡಿಸಲು ಅನುವು ಮಾಡಿಕೊಡುತ್ತದೆ.
ಗ್ರಾಮೀಣ ಆರ್ಥಿಕತೆಗೆ ಹೊಸ ವೇಗವನ್ನು ನೀಡುವ ಉದ್ದೇಶದಿಂದ 2 ಲಕ್ಷ ಹೊಸ ಬಹುಪಯೋಗಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು (ಪಿಎಸಿಎಸ್), ಡೈರಿ ಮತ್ತು ಮೀನುಗಾರಿಕೆ ಸಹಕಾರ ಸಂಘಗಳ ಸ್ಥಾಪನೆಯ ಪ್ರಗತಿಯ ಕುರಿತು ಚರ್ಚೆಗಳು ನಡೆಯಲಿವೆ. ವಿಶ್ವದ ಅತಿದೊಡ್ಡ ಧಾನ್ಯ ಸಂಗ್ರಹಣಾ ಯೋಜನೆಯಡಿಯಲ್ಲಿ ಆಧುನಿಕ ಗೋದಾಮುಗಳ ರಾಷ್ಟ್ರವ್ಯಾಪಿ ಜಾಲವನ್ನು ವಿಸ್ತರಿಸುವ ಬಗ್ಗೆಯೂ ಸಮಾಲೋಚನೆ ನಡೆಸಲಾಗುವುದು, ಇದು ಸುಧಾರಿತ ಸಂಗ್ರಹಣಾ ಸೌಲಭ್ಯಗಳು, ಬೆಲೆ ಸ್ಥಿರತೆ ಮತ್ತು ರೈತರಿಗೆ ಉತ್ತಮ ಮಾರುಕಟ್ಟೆ ಪ್ರವೇಶವನ್ನು ಖಚಿತಪಡಿಸುತ್ತದೆ.
ರಫ್ತು, ಸಾವಯವ ಕೃಷಿ ಮತ್ತು ಗುಣಮಟ್ಟದ ಬೀಜ ಪೂರೈಕೆ ಕ್ಷೇತ್ರಗಳಲ್ಲಿ ಸಹಕಾರಿಗಳನ್ನು ಬಲಪಡಿಸಲು ಹೊಸದಾಗಿ ರೂಪುಗೊಂಡ ರಾಷ್ಟ್ರೀಯ ಮಟ್ಟದ ಸಹಕಾರಿ ಸಂಸ್ಥೆಗಳಾದ – ರಾಷ್ಟ್ರೀಯ ಸಹಕಾರಿ ರಫ್ತು ಲಿಮಿಟೆಡ್ (ಎನ್ ಸಿ ಇ ಎಲ್), ರಾಷ್ಟ್ರೀಯ ಸಹಕಾರಿ ಸಾವಯವ ಲಿಮಿಟೆಡ್ (ಎನ್ ಸಿ ಒ ಎಲ್), ಮತ್ತು ಭಾರತೀಯ ಬೀಜ ಸಹಕಾರಿ ಸಮಿತಿ ಲಿಮಿಟೆಡ್ (ಬಿ ಬಿ ಎಸ್ ಎಸ್ ಎಲ್) – ಗಳಲ್ಲಿ ರಾಜ್ಯಗಳ ಭಾಗವಹಿಸುವಿಕೆ ಮತ್ತು ನಿರೀಕ್ಷೆಗಳ ಮೇಲೆ ಸಭೆಯು ಗಮನ ಕೇಂದ್ರೀಕರಿಸಲಿದೆ.
ಇದಲ್ಲದೆ, ರಾಜ್ಯ ಸಹಕಾರಿ ಕಾನೂನುಗಳಲ್ಲಿ ಕಾಲಮಿತಿಯ ಸುಧಾರಣೆಗಳು, 97ನೇ ಸಾಂವಿಧಾನಿಕ ತಿದ್ದುಪಡಿಗೆ ಅನುಗುಣವಾಗಿ ಮಾದರಿ ಶಾಸನಗಳನ್ನು ಅಳವಡಿಸಿಕೊಳ್ಳುವುದು, ಸಹಕಾರಿ ಸಕ್ಕರೆ ಕಾರ್ಖಾನೆಗಳ ಆರ್ಥಿಕ ಕಾರ್ಯಸಾಧ್ಯತೆಯನ್ನು ಹೆಚ್ಚಿಸುವುದು, ಡೈರಿ ಕ್ಷೇತ್ರದಲ್ಲಿ ಮರುಬಳಕೆ ಮತ್ತು ಸುಸ್ಥಿರತೆಯನ್ನು ಉತ್ತೇಜಿಸುವುದು ಹಾಗೂ ಅಮುಲ್ ಮತ್ತು ಎನ್ ಡಿ ಡಿ ಬಿ ಸಹಯೋಗದೊಂದಿಗೆ ಹೊಸ ಡೈರಿ ಸಹಕಾರ ಸಂಘಗಳ ರಚನೆಯ ಬಗ್ಗೆಯೂ ಚರ್ಚೆಗಳು ನಡೆಯಲಿವೆ.
ಬೇಳೆಕಾಳುಗಳು ಮತ್ತು ಮೆಕ್ಕೆಜೋಳ ಉತ್ಪಾದನೆಯ ಉತ್ತೇಜನ, ಸಹಕಾರಿ ಬ್ಯಾಂಕುಗಳು ಎದುರಿಸುತ್ತಿರುವ ಸವಾಲುಗಳ ಪರಿಹಾರ, ಹಂಚಿಕೆಯ ಸೇವಾ ಘಟಕಗಳು (ಎಸ್ ಎಸ್ ಇ) ಮತ್ತು ಸಮೂಹ ರಚನೆಗಳ ಬಲಪಡಿಸುವಿಕೆ, ಸದಸ್ಯತ್ವದ ವಿಸ್ತರಣೆ ಮತ್ತು ಜಾಗೃತಿ ಅಭಿಯಾನಗಳು ಹಾಗೂ ಪರಿಣಾಮಕಾರಿ ಮಾಧ್ಯಮ ಮತ್ತು ಸಂವಹನ ತಂತ್ರದ ಅಭಿವೃದ್ಧಿಯಂತಹ ವಿಷಯಗಳು ಸಹ ಸಮಾಲೋಚನೆಯ ಭಾಗವಾಗಿರಲಿವೆ.
ಜೊತೆಗೆ, ಪಿಎಸಿಎಸ್ ಮತ್ತು ಆರ್ ಸಿ ಎಸ್ ಕಚೇರಿಗಳ ಗಣಕೀಕರಣ, ರಾಷ್ಟ್ರೀಯ ಸಹಕಾರಿ ದತ್ತಸಂಚಯದ ಬಳಕೆ, ಮಾನವ ಸಂಪನ್ಮೂಲ ಅಭಿವೃದ್ಧಿ ಮತ್ತು ತರಬೇತಿ ಹಾಗೂ ರಾಷ್ಟ್ರೀಯ ಸಹಕಾರಿ ಅಭಿವೃದ್ಧಿ ನಿಗಮದ ಯೋಜನೆಗಳ ಸುಧಾರಿತ ಅನುಷ್ಠಾನಕ್ಕೆ ಸಂಬಂಧಿಸಿದಂತೆ ರಾಜ್ಯಗಳ ನಿರೀಕ್ಷೆಗಳ ಬಗ್ಗೆ ಚರ್ಚಿಸಲಾಗುವುದು.
ಈ ಮಂಥನ ಸಭೆಯು ಸಹಕಾರಿ ಒಕ್ಕೂಟ ವ್ಯವಸ್ಥೆಯ ಸ್ಫೂರ್ತಿಯನ್ನು ಮತ್ತಷ್ಟು ಬಲಪಡಿಸುವ ಮತ್ತು ಕೇಂದ್ರ ಹಾಗೂ ರಾಜ್ಯಗಳ ನಡುವೆ ನಿಕಟ ಸಮನ್ವಯವನ್ನು ಬೆಳೆಸುವ ನಿರೀಕ್ಷೆಯಿದೆ, ಆ ಮೂಲಕ ಸಹಕಾರ ಸಂಘಗಳನ್ನು ತಳಮಟ್ಟದಲ್ಲಿ ಸಮೃದ್ಧಿ, ಉದ್ಯೋಗ ಸೃಷ್ಟಿ ಮತ್ತು ಸ್ವಾವಲಂಬನೆಯ ಪ್ರಬಲ ಸಾಧನವನ್ನಾಗಿ ಮಾಡುವ ಗುರಿ ಹೊಂದಲಾಗಿದೆ.
Source :PIB

