ನವದೆಹಲಿ ಫ್ರಾಂಟಿಯರ್ ಎಐ ಬದ್ಧತೆಗಳ ಗುರಿ: ಎಐ ಲಭ್ಯತೆ ಮತ್ತು ನಾವೀನ್ಯತೆಯ ಪ್ರಜಾಪ್ರಭುತ್ವೀಕರಣ
‘ಮಾನವರಿಂದ, ಮಾನವರಿಗಾಗಿ ಮತ್ತು ಮಾನವರದ್ದೇ ಆದ ಎಐ ಭವಿಷ್ಯವನ್ನು ರೂಪಿಸೋಣ’: ಕೇಂದ್ರ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್
‘ಇಂಡಿಯಾ ಎಐ ಇಂಪ್ಯಾಕ್ಟ್ ಶೃಂಗಸಭೆ 2026’ರ ಉದ್ಘಾಟನಾ ಸಮಾರಂಭದಲ್ಲಿ, ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಅವರು ‘ನವದೆಹಲಿ ಫ್ರಾಂಟಿಯರ್ ಎಐ ಇಂಪ್ಯಾಕ್ಟ್ ಬದ್ಧತೆʼಗಳನ್ನು ಘೋಷಿಸಿದರು. ಶೃಂಗಸಭೆಯ ಮೈಲಿಗಲ್ಲಾದ ಈ ನಿರ್ಧಾರವು, ಎಲ್ಲರನ್ನೂ ಒಳಗೊಳ್ಳುವ ಮತ್ತು ಜವಾಬ್ದಾರಿಯುತ ಕೃತಕ ಬುದ್ಧಿಮತ್ತೆಯನ್ನು ಮುನ್ನಡೆಸಲು ವಿಶ್ವದ ಪ್ರಮುಖ ಎಐ ಕಂಪನಿಗಳನ್ನು ಹಾಗೂ ಭಾರತದ ದೇಶೀಯ ನಾವೀನ್ಯಕಾರರನ್ನು ಒಂದೇ ವೇದಿಕೆಗೆ ತರುತ್ತದೆ.
ಶೃಂಗಸಭೆಯಲ್ಲಿ ಮಾತನಾಡಿದ ಶ್ರೀ ಅಶ್ವಿನಿ ವೈಷ್ಣವ್ ಅವರು, ಭಾರತದ ಎಐ ಕಾರ್ಯತಂತ್ರವು ಪ್ರಜಾಪ್ರಭುತ್ವೀಕರಣ, ವಿಸ್ತರೀಕರಣ ಮತ್ತು ಸಾರ್ವಭೌಮತ್ವದಲ್ಲಿ ಬೇರೂರಿದೆ ಎಂದು ಬಣ್ಣಿಸಿದರು. ಅಪ್ಲಿಕೇಶನ್ ಗಳು, ಮಾದರಿಗಳು, ಕಂಪ್ಯೂಟ್, ಪ್ರತಿಭೆ ಮತ್ತು ಶಕ್ತಿ – ಹೀಗೆ ಎಐ ಸ್ಟಾಕ್ ನ ಐದು ಪದರಗಳಲ್ಲಿ ಭಾರತದ ಸಮಗ್ರ ವಿಧಾನವನ್ನು ಅವರು ವಿವರಿಸಿದರು. ಆರೋಗ್ಯ, ಕೃಷಿ, ಶಿಕ್ಷಣ ಮತ್ತು ಸಾರ್ವಜನಿಕ ಸೇವೆಗಳಲ್ಲಿ ಇವುಗಳ ನೈಜ ಬಳಕೆಯ ಬಗ್ಗೆ ಅವರು ಒತ್ತು ನೀಡಿದರು.
ಎಐ ಒಂದು ಮೂಲಭೂತ ತಂತ್ರಜ್ಞಾನವಾಗಿದೆ. ನಾವು ಕೆಲಸ ಮಾಡುವ, ಕಲಿಯುವ ಮತ್ತು ನಿರ್ಧಾರ ತೆಗೆದುಕೊಳ್ಳುವ ವಿಧಾನವನ್ನು ಇದು ಈಗಾಗಲೇ ಬದಲಾಯಿಸುತ್ತಿದೆ. ತಂತ್ರಜ್ಞಾನದ ನಿಜವಾದ ಮೌಲ್ಯವು ಅದರ ಪ್ರಯೋಜನಗಳು ಜನಸಾಮಾನ್ಯರನ್ನು ತಲುಪುವಂತೆ ಮಾಡುವುದರಲ್ಲಿದೆ ಎಂಬುದು ನಮ್ಮ ಗೌರವಾನ್ವಿತ ಪ್ರಧಾನಮಂತ್ರಿಯವರ ನಂಬಿಕೆಯಾಗಿದೆ. ತಂತ್ರಜ್ಞಾನವನ್ನು ಪ್ರಜಾಪ್ರಭುತ್ವೀಕರಣಗೊಳಿಸುವುದು, ಅದನ್ನು ದೊಡ್ಡ ಮಟ್ಟದಲ್ಲಿ ಜಾರಿಗೆ ತರುವುದು ಮತ್ತು ಎಲ್ಲರಿಗೂ ಸುಲಭವಾಗಿ ಲಭ್ಯವಾಗುವಂತೆ ಮಾಡುವುದು ನಮ್ಮ ಪ್ರಧಾನಿಯವರ ದೃಷ್ಟಿಕೋನವಾಗಿದೆ. ಅದಕ್ಕಾಗಿಯೇ ಭಾರತದಲ್ಲಿ ನಾವು ಎಐ ಸ್ಟಾಕ್ ನ ಎಲ್ಲಾ ಐದು ಪದರಗಳಲ್ಲಿ ಕೆಲಸ ಮಾಡುತ್ತಿದ್ದೇವೆ ಎಂದು ಅವರು ಹೇಳಿದರು. ನಾವು ಪ್ರಾಮಾಣಿಕವಾಗಿ ಎಐ ಪ್ರಯೋಜನಗಳನ್ನು ಬಳಸಿಕೊಳ್ಳುವಾಗ, ಅದರ ಅಪಾಯಗಳನ್ನು ತಗ್ಗಿಸಲು ಸಾಮೂಹಿಕ ಪರಿಹಾರಗಳನ್ನು ಸಹ ಕಂಡುಕೊಳ್ಳಬೇಕು. ಮಾನವ ಸುರಕ್ಷತೆ ಮತ್ತು ಘನತೆಯನ್ನು ಎಐನ ಕೇಂದ್ರಬಿಂದುವಾಗಿಸುವ ಮೂಲಕ, ನಾವು ದೃಢವಾಗಿ ಮುನ್ನಡೆಯಬಹುದು. ಮಾನವರಿಂದ, ಮಾನವರಿಗಾಗಿ ಮತ್ತು ಮಾನವರದ್ದೇ ಆದ ಎಐ ಭವಿಷ್ಯವನ್ನು ನಾವು ರೂಪಿಸೋಣ ಎಂದು ಶ್ರೀ ಅಶ್ವಿನಿ ವೈಷ್ಣವ್ ಹೇಳಿದರು.
ಈ ಸ್ವಯಂಪ್ರೇರಿತ ಬದ್ಧತೆಗಳು ವಿಶೇಷವಾಗಿ ಜಾಗತಿಕ ದಕ್ಷಿಣದ ರಾಷ್ಟ್ರಗಳಲ್ಲಿ ಎಐ ವ್ಯವಸ್ಥೆಗಳ ಅಭಿವೃದ್ಧಿ ಮತ್ತು ನಿಯೋಜನೆಯು ಸಮಾನತೆ, ಸಾಂಸ್ಕೃತಿಕ ವೈವಿಧ್ಯತೆ ಮತ್ತು ನೈಜ ಪ್ರಪಂಚದ ಅಗತ್ಯಗಳೊಂದಿಗೆ ಹೊಂದಿಕೆಯಾಗುವುದನ್ನು ಖಚಿತಪಡಿಸಿಕೊಳ್ಳುವ ಹಂಚಿಕೆಯ ದೃಷ್ಟಿಕೋನವನ್ನು ಪ್ರತಿಬಿಂಬಿಸುತ್ತವೆ. ಈ ಉಪಕ್ರಮದಲ್ಲಿ ಪಾಲ್ಗೊಳ್ಳುವ ಸಂಸ್ಥೆಗಳಲ್ಲಿ ಜಾಗತಿಕ ಫ್ರಾಂಟಿಯರ್ ಎಐ ಕಂಪನಿಗಳ ಜೊತೆಗೆ ಭಾರತೀಯ ಮೂಲದ ನಾವೀನ್ಯಕಾರರಾದ ಸರ್ವಂ, ಭಾರತ್ ಜೆನ್, ಜ್ಞಾನಿ.ಎಐ ಮತ್ತು ಸೋಕೆಟ್ ಸೇರಿವೆ.
ಮೊದಲ ಬದ್ಧತೆಯಾದ “ನೈಜ-ಪ್ರಪಂಚದ ಎಐ ಬಳಕೆಯ ಬಗ್ಗೆ ತಿಳುವಳಿಕೆಯನ್ನು ಹೆಚ್ಚಿಸುವುದು”, ಅನಾಮಧೇಯ ಮತ್ತು ಒಟ್ಟುಗೂಡಿಸಿದ ಒಳನೋಟಗಳ ಮೂಲಕ ಎಐನ ನೈಜ ಬಳಕೆಯ ಮೇಲೆ ಕೇಂದ್ರೀಕರಿಸುತ್ತದೆ. ಭಾಗವಹಿಸುವ ಸಂಸ್ಥೆಗಳು ಉದ್ಯೋಗಗಳು, ಕೌಶಲ್ಯಗಳು, ಉತ್ಪಾದಕತೆ ಮತ್ತು ಆರ್ಥಿಕ ರೂಪಾಂತರದ ಮೇಲೆ ಎಐ ಬೀರುವ ಪ್ರಭಾವದ ಕುರಿತು ನೀತಿ ನಿರೂಪಣೆಗೆ ಪೂರಕವಾದ ಪುರಾವೆಗಳನ್ನು ಸೃಷ್ಟಿಸಲು ಕೆಲಸ ಮಾಡುತ್ತವೆ. ವಿವಿಧ ಕ್ಷೇತ್ರಗಳಲ್ಲಿ ಎಐ ಅನ್ನು ಹೇಗೆ ನಿಯೋಜಿಸಲಾಗುತ್ತಿದೆ ಎಂಬುದರ ಡೇಟಾ-ಚಾಲಿತ ವಿಶ್ಲೇಷಣೆಯನ್ನು ಸಕ್ರಿಯಗೊಳಿಸುವ ಮೂಲಕ, ತಾಂತ್ರಿಕ ಬದಲಾವಣೆಗೆ ಸಂಬಂಧಿಸಿದ ಅಪಾಯಗಳನ್ನು ತಗ್ಗಿಸಿ ಪ್ರಯೋಜನಗಳನ್ನು ಗರಿಷ್ಠಗೊಳಿಸುವ ಮಾಹಿತಿ ಆಧಾರಿತ ಕಾರ್ಯತಂತ್ರಗಳನ್ನು ರೂಪಿಸಲು ಈ ಉಪಕ್ರಮವು ಸರ್ಕಾರಗಳಿಗೆ ಮತ್ತು ಸಂಸ್ಥೆಗಳಿಗೆ ಸಹಾಯ ಮಾಡುವ ಗುರಿಯನ್ನು ಹೊಂದಿದೆ.
ಎರಡನೇ ಬದ್ಧತೆಯಾದ “ಬಹುಭಾಷಾ ಮತ್ತು ಸಂದರ್ಭೋಚಿತ ಮೌಲ್ಯಮಾಪನಗಳನ್ನು ಬಲಪಡಿಸುವುದು”, ವಿವಿಧ ಭಾಷೆಗಳು, ಸಂಸ್ಕೃತಿಗಳು ಮತ್ತು ನೈಜ ಪ್ರಪಂಚದ ಬಳಕೆಯ ಸಂದರ್ಭಗಳಲ್ಲಿ ಎಐ ವ್ಯವಸ್ಥೆಗಳ ಪರಿಣಾಮಕಾರಿತ್ವವನ್ನು ಖಚಿತಪಡಿಸಿಕೊಳ್ಳುವ ಪ್ರಯತ್ನಗಳ ಮೇಲೆ ಕೇಂದ್ರೀಕರಿಸುತ್ತದೆ. ಕಡಿಮೆ ಪ್ರಾತಿನಿಧ್ಯ ಹೊಂದಿರುವ ಭಾಷೆಗಳು ಮತ್ತು ಸಾಂಸ್ಕೃತಿಕ ಸಂದರ್ಭಗಳಲ್ಲಿ ಮೌಲ್ಯಮಾಪನವನ್ನು ಬೆಂಬಲಿಸುವ ಡೇಟಾಸೆಟ್ ಗಳು, ಮಾನದಂಡಗಳು ಮತ್ತು ಪರಿಣತಿಯನ್ನು ಅಭಿವೃದ್ಧಿಪಡಿಸಲು ಸಂಸ್ಥೆಗಳು ಸರ್ಕಾರಗಳು ಮತ್ತು ಸ್ಥಳೀಯ ಪರಿಸರ ವ್ಯವಸ್ಥೆಗಳೊಂದಿಗೆ ಸಹಯೋಗ ಹೊಂದಲಿವೆ. ಈ ಪ್ರಯತ್ನವು ವೈವಿಧ್ಯಮಯ ಜನಸಂಖ್ಯೆಗಾಗಿ ಎಐ ಕಾರ್ಯಕ್ಷಮತೆಯನ್ನು ಸುಧಾರಿಸುತ್ತದೆ ಮತ್ತು ಜಾಗತಿಕವಾಗಿ ಉತ್ತಮ ಗುಣಮಟ್ಟದ ಎಐ ಅನುಭವಗಳ ಲಭ್ಯತೆಯನ್ನು ಪ್ರಜಾಪ್ರಭುತ್ವೀಕರಣಗೊಳಿಸಲು ಸಹಾಯ ಮಾಡುತ್ತದೆ.
ಎಐ ಸಮಸ್ತ ಮಾನವಕುಲದ ಸೇವೆ ಮಾಡುವುದನ್ನು ಖಚಿತಪಡಿಸಿಕೊಳ್ಳಲು ಸರ್ಕಾರಗಳು, ಉದ್ಯಮ ಮತ್ತು ಸಂಶೋಧನಾ ಸಮುದಾಯಗಳ ನಡುವಿನ ಸಹಯೋಗದ ಕ್ರಮ ಅತ್ಯಗತ್ಯ ಎಂದು ಕೇಂದ್ರ ಸಚಿವರು ಒತ್ತಿ ಹೇಳಿದರು. ವಿಶ್ವಾದ್ಯಂತ ಜವಾಬ್ದಾರಿಯುತ ಎಐ ಅಭಿವೃದ್ಧಿಗೆ ಅಡಿಪಾಯವಾಗಿ ಈ ಬದ್ಧತೆಗಳನ್ನು ಮುನ್ನಡೆಸಲು ಪಾಲ್ಗೊಳ್ಳುವ ಸಂಸ್ಥೆಗಳ ನಾಯಕರಿಗೆ ಅವರು ಆಹ್ವಾನ ನೀಡಿದರು.
Source : PIB

