ಇಂಡಿಯಾ ಎಐ ಇಂಪ್ಯಾಕ್ಟ್ ಶೃಂಗಸಭೆ 2026: ‘ಎಐ ಮತ್ತು ಅದರ ಪ್ರಭಾವ’ ಕುರಿತ ಸಂಶೋಧನಾ ವಿಚಾರಗೋಷ್ಠಿ ಆಯೋಜನೆ
ಸುರಕ್ಷಿತ ಮತ್ತು ಪರಿವರ್ತಕ ಬುದ್ಧಿವಂತಿಕೆಯ ಭವಿಷ್ಯದ ಕುರಿತು ಜಾಗತಿಕ ಎಐ ದಾರ್ಶನಿಕರ ಸಮಾಲೋಚನೆ
ಶಕ್ತಿಯುತ, ನಂಬಲರ್ಹ ಮತ್ತು ಮಾನವ ಮೌಲ್ಯಗಳಿಗೆ ಅನುಗುಣವಾಗಿರುವ ಎಐ ವ್ಯವಸ್ಥೆಗಳಿಗಾಗಿ ವಿಚಾರಗೋಷ್ಠಿಯಲ್ಲಿ ಕರೆ
ಇಂಡಿಯಾ ಎಐ ಇಂಪ್ಯಾಕ್ಟ್ ಶೃಂಗಸಭೆ 2026ರ ಭಾಗವಾಗಿ ಶೃಂಗಸಭೆಯ ಮೂರನೇ ದಿನವಾದ 2026ರ ಫೆಬ್ರವರಿ 18ರಂದು ನಡೆದ ‘ಎಐ ಮತ್ತು ಅದರ ಪ್ರಭಾವ’ ಕುರಿತ ಸಂಶೋಧನಾ ವಿಚಾರಗೋಷ್ಠಿಯು, ವಿಜ್ಞಾನ, ಆಡಳಿತ, ಉದ್ಯಮ ಮತ್ತು ಸಮಾಜದಾದ್ಯಂತ ಕೃತಕ ಬುದ್ಧಿಮತ್ತೆಯ ಪರಿವರ್ತಕ ಪಾತ್ರವನ್ನು ಅನ್ವೇಷಿಸಲು ಪ್ರಮುಖ ಸಂಶೋಧಕರು, ನೀತಿ ನಿರೂಪಕರು, ತಂತ್ರಜ್ಞರು ಮತ್ತು ಉದ್ಯಮದ ಮುಖಂಡರನ್ನು ಒಂದುಗೂಡಿಸಿತು. ಮುಂಚೂಣಿ ಸಂಶೋಧನೆ ಮತ್ತು ನೈಜ-ಜಗತ್ತಿನ ಅನ್ವಯಿಕೆಗಳ ನಡುವಿನ ಅಂತರವನ್ನು ಕಡಿಮೆ ಮಾಡುವ ವೇದಿಕೆಯಾಗಿ ವಿನ್ಯಾಸಗೊಳಿಸಲಾದ ಈ ವಿಚಾರಗೋಷ್ಠಿಯು, ಸಾರ್ವಜನಿಕ ಹಿತಾಸಕ್ತಿ, ಸುರಕ್ಷತೆ ಮತ್ತು ಸಮಗ್ರ ಬೆಳವಣಿಗೆಯೊಂದಿಗೆ ಎಐ ಹೇಗೆ ವೈಜ್ಞಾನಿಕ ಸಾಧನೆಗಳನ್ನು ಉತ್ತೇಜಿಸಬಹುದು ಎಂಬುದನ್ನು ಪರಿಶೀಲಿಸಿತು.
ತಮ್ಮ ವಿಶೇಷ ಭಾಷಣದಲ್ಲಿ, ಭಾರತದ AI ಪ್ರಯಾಣವನ್ನು ಪ್ರಾಯೋಗಿಕ ಅಳವಡಿಕೆ ಮತ್ತು ಬೃಹತ್ ಪ್ರಮಾಣದ ಪ್ರಭಾವದ (population-scale impact) ಹಿನ್ನೆಲೆಯಲ್ಲಿ ವಿವರಿಸಿದ ಶ್ರೀ ಅಶ್ವಿನಿ ವೈಷ್ಣವ್ ಅವರು, “ನಡೆಯುತ್ತಿರುವ AI ಎಕ್ಸ್ ಪೋದಲ್ಲಿ ಸಾವಿರಾರು ಯುವಕರೊಂದಿಗೆ ಸಂವಾದ ನಡೆಸುವಾಗ, ಭವಿಷ್ಯದ ಬಗ್ಗೆ ಅವರಿಗಿರುವ ಆಶಾವಾದವು ನನಗೆ ವಿಶೇಷವಾಗಿ ಕಂಡುಬಂತು. ಆ ಆತ್ಮವಿಶ್ವಾಸವು ನಮ್ಮ ದೇಶಕ್ಕೆ ಮತ್ತು ಜಗತ್ತಿಗೆ ಒಂದು ಹೊಸ ಅಧ್ಯಾಯದ ಬಗ್ಗೆ ನನ್ನಲ್ಲಿ ಭರವಸೆಯನ್ನು ಮೂಡಿಸಿದೆ. ಭಾರತದಲ್ಲಿ ನಮ್ಮ ಗಮನವು ‘AI ಅಟ್ ದಿ ಎಡ್ಜ್’ (AI at the edge) ಮೇಲಿದೆ. ಇದು ನೈಜ ಜಗತ್ತಿನ ಸಮಸ್ಯೆಗಳನ್ನು ಪರಿಹರಿಸುವ, ಉದ್ಯಮದ ಉತ್ಪಾದಕತೆಯನ್ನು ಸುಧಾರಿಸುವ ಹಾಗೂ ಆರೋಗ್ಯ ಸೇವೆ, ಕೃಷಿ ಮತ್ತು ಹವಾಮಾನ ಬದಲಾವಣೆಯಂತಹ ಬೃಹತ್ ಪ್ರಮಾಣದ ಸವಾಲುಗಳನ್ನು ಎದುರಿಸುವ AI ತಂತ್ರಜ್ಞಾನವಾಗಿದೆ. ಜವಾಬ್ದಾರಿಯುತವಾಗಿ ಭವಿಷ್ಯವನ್ನು ರೂಪಿಸಲು ಈ ವಿಚಾರಗೋಷ್ಠಿಯು ಒಂದು ಉತ್ತಮ ಅವಕಾಶವಾಗಿದೆ. AI ಅನ್ನು ಸುರಕ್ಷಿತವಾಗಿ ಮತ್ತು ಮಾನವಕುಲಕ್ಕೆ ನಿಜವಾಗಿಯೂ ಪ್ರಯೋಜನಕಾರಿಯಾಗಿ ಮಾಡುವ ಬಗ್ಗೆ ಸ್ಪಷ್ಟವಾದ ಆಲೋಚನೆಗಳನ್ನು ನೀಡುವಂತೆ ನಾನು ಇಲ್ಲಿರುವ ನಾಯಕರನ್ನು ಕೋರುತ್ತೇನೆ.” ಎಂದು ಹೇಳಿದರು.
ವಿಜ್ಞಾನ ಮತ್ತು ವೈದ್ಯಕೀಯ ಕ್ಷೇತ್ರವನ್ನು ಮುನ್ನಡೆಸುವಲ್ಲಿ AIನ ಸಾಮರ್ಥ್ಯವನ್ನು ಉಲ್ಲೇಖಿಸುತ್ತಾ, ಗೂಗಲ್ ಡೀಪ್ ಮೈಂಡ್ ನ (Google DeepMind) ಸಹ-ಸಂಸ್ಥಾಪಕ ಮತ್ತು ಸಿಇಒ ಸರ್ ಡೆಮಿಸ್ ಹಸ್ಸಾಬಿಸ್ ಅವರು, “ನಾವು ಆರ್ಟಿಫಿಶಿಯಲ್ ಜನರಲ್ ಇಂಟೆಲಿಜೆನ್ಸ್ (AGI) ಸನ್ನಿಹಿತವಾಗಿರುವ ಒಂದು ಹೊಸ್ತಿಲಿನ ಕ್ಷಣದಲ್ಲಿದ್ದೇವೆ. AI ಮಾನವ ಇತಿಹಾಸದಲ್ಲಿ ಅತ್ಯಂತ ಪರಿವರ್ತಕ ತಂತ್ರಜ್ಞಾನಗಳಲ್ಲಿ ಒಂದಾಗಲಿದೆ. ವಿಜ್ಞಾನ, ವೈದ್ಯಕೀಯ ಮತ್ತು ಮಾನವನ ಆರೋಗ್ಯವನ್ನು ಮುನ್ನಡೆಸುವಲ್ಲಿ ಇದು ಅಸಾಧಾರಣ ಸಾಮರ್ಥ್ಯವನ್ನು ಹೊಂದಿದೆ, ಆದರೆ ಇದು ನೈಜ ಅಪಾಯಗಳನ್ನೂ ಸಹ ಒಳಗೊಂಡಿದೆ. ಈ ತಂತ್ರಜ್ಞಾನವು ಇಡೀ ಪ್ರಪಂಚದ ಮೇಲೆ ಪ್ರಭಾವ ಬೀರಲಿರುವುದರಿಂದ, ಅದರ ಪ್ರಯೋಜನಗಳನ್ನು ಎಲ್ಲರಿಗೂ ಹಂಚಲಾಗಿದೆಯೇ ಮತ್ತು ಅದರ ಅಪಾಯಗಳನ್ನು ಜವಾಬ್ದಾರಿಯುತವಾಗಿ ನಿರ್ವಹಿಸಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳಲು ಅಂತಾರಾಷ್ಟ್ರೀಯ ಸಂವಾದ ಮತ್ತು ಸಹಕಾರ ಅತ್ಯಗತ್ಯ” ಎಂದು ಹೇಳಿದರು.
ಶೈಕ್ಷಣಿಕ ಹಿನ್ನೆಲೆಯನ್ನು ವಿವರಿಸುತ್ತಾ, ಐಐಐಟಿ ಹೈದರಾಬಾದ್ ನ ಮಾಜಿ ನಿರ್ದೇಶಕರಾದ ಪ್ರೊ. ಪಿ.ಜೆ. ನಾರಾಯಣನ್ ಅವರು ಜಾಗತಿಕ ವೈಜ್ಞಾನಿಕ ಚರ್ಚೆಗಳಲ್ಲಿ AIನ ಕ್ಷಿಪ್ರ ಬೆಳವಣಿಗೆಯನ್ನು ಮತ್ತು ಅದರ ಅವಕಾಶ ಹಾಗೂ ಅಪಾಯಗಳೆರಡರ ಬಗ್ಗೆಯೂ ವಿವಿಧ ದೃಷ್ಟಿಕೋನಗಳನ್ನು ಒಳಗೊಳ್ಳುವ ಅಗತ್ಯವನ್ನು ಒತ್ತಿ ಹೇಳಿದರು. ಮುಖ್ಯ ಭಾಷಣಗಳು, ಮುಂಚೂಣಿ AI ಪ್ರಶ್ನೆಗಳ ಕುರಿತಾದ ಸಂಶೋಧನಾ ಸಂವಾದಗಳು, ಗ್ಲೋಬಲ್ ಸೌತ್ ಕೇಂದ್ರಿತ ಪ್ಯಾನಲ್ ಗಳು ಮತ್ತು ಪ್ರಮುಖ ಅಂತಾರಾಷ್ಟ್ರೀಯ ಸಂಶೋಧಕರಿಂದ ಪೋಸ್ಟರ್ ಪ್ರಸ್ತುತಿಗಳನ್ನು ಒಳಗೊಂಡಿರುವ ಈ ವಿಚಾರಗೋಷ್ಠಿಯ ವ್ಯವಸ್ಥಿತ ರೂಪರೇಷೆಗಳನ್ನು ಅವರು ಎತ್ತಿ ತೋರಿಸಿದರು. ಇದನ್ನು “AI ಸಂಶೋಧನೆಯ ಮುಂದಿನ ಹಂತಗಳು ಮತ್ತು ಅದರ ಸಾಮಾಜಿಕ ಪ್ರಭಾವದ ಕುರಿತು ಸಂವಾದ ಹಾಗೂ ಚರ್ಚೆಗಳನ್ನು ಉತ್ತೇಜಿಸಲು” ವಿನ್ಯಾಸಗೊಳಿಸಲಾದ ವೇದಿಕೆ ಎಂದು ಅವರು ಬಣ್ಣಿಸಿದರು.
ಒಟ್ಟಾರೆಯಾಗಿ, ಈ ಆರಂಭಿಕ ಭಾಷಣಗಳು AIನ ವಿಕಾಸದ ಒಂದು ಪ್ರಮುಖ ಘಟ್ಟದಲ್ಲಿ ವೈಜ್ಞಾನಿಕ ನಿಖರತೆ, ಜಾಗತಿಕ ಸಹಯೋಗ ಮತ್ತು ಜವಾಬ್ದಾರಿಯುತ ನಾವೀನ್ಯತೆಯನ್ನು ಆಧರಿಸಿದ ವಿಚಾರಗೋಷ್ಠಿಗೆ ಭದ್ರವಾದ ಮುನ್ನುಡಿ ಬರೆದವು.
ತಮ್ಮ ಪ್ರಧಾನ ಭಾಷಣದ ಅಧಿವೇಶನದಲ್ಲಿ, ಸರ್ ಡೆಮಿಸ್ ಹಸ್ಸಾಬಿಸ್ ಅವರು 2010ರಲ್ಲಿ ಡೀಪ್ ಮೈಂಡ್ (DeepMind) ಸ್ಥಾಪಿಸಿದಾಗಿನಿಂದ AI ಸಾಧಿಸಿರುವ ಕ್ಷಿಪ್ರ ಪ್ರಗತಿಯನ್ನು ಮೆಲುಕು ಹಾಕಿದರು. ಆದರೆ ನೈಜ ಆರ್ಟಿಫಿಶಿಯಲ್ ಜನರಲ್ ಇಂಟೆಲಿಜೆನ್ಸ್ (AGI) ಇನ್ನೂ ಪ್ರಗತಿಯ ಹಂತದಲ್ಲಿದೆ ಎಂದು ಅವರು ಎಚ್ಚರಿಸಿದರು. ನಿರಂತರ ಕಲಿಕೆ, ದೀರ್ಘಕಾಲದ ಯೋಜನೆ ಮತ್ತು ವಿವಿಧ ಕಾರ್ಯಗಳ ನಡುವಿನ ಸ್ಥಿರತೆಯಂತಹ ಪ್ರಮುಖ ತಾಂತ್ರಿಕ ಕೊರತೆಗಳನ್ನು ಅವರು ವಿವರಿಸಿದರು. ಆದಾಗ್ಯೂ, AI ತಂತ್ರಜ್ಞಾನವು ವೈಜ್ಞಾನಿಕ ಅನ್ವೇಷಣೆಯ ಹೊಸ ಯುಗವನ್ನು ಆರಂಭಿಸುತ್ತದೆ ಎಂಬ ಬಗ್ಗೆ ಅವರು ಬಲವಾದ ಆಶಾವಾದ ವ್ಯಕ್ತಪಡಿಸಿದರು. ಕೊನೆಯಲ್ಲಿ “ಎಚ್ಚರಿಕೆಯ ಆಶಾವಾದ” ಎಂಬ ಸಂದೇಶವನ್ನು ನೀಡಿದ ಅವರು, ತಾಂತ್ರಿಕ ಸವಾಲುಗಳನ್ನು ನಾವೀನ್ಯತೆಯ ಮೂಲಕ ಪರಿಹರಿಸಬಹುದು, ಆದರೆ AIನ ಪ್ರಯೋಜನಗಳು ಎಲ್ಲರಿಗೂ ದೊರೆಯುವಂತೆ ಮಾಡಲು ಮತ್ತು ಅದರ ಅಪಾಯಗಳನ್ನು ಜವಾಬ್ದಾರಿಯುತವಾಗಿ ನಿರ್ವಹಿಸಲು ಅಂತಾರಾಷ್ಟ್ರೀಯ ಸಹಕಾರ ಅತ್ಯಗತ್ಯ ಎಂದು ಒತ್ತಿ ಹೇಳಿದರು.
ಎರಡನೇ ಪ್ರಧಾನ ಭಾಷಣದ ಅಧಿವೇಶನದಲ್ಲಿ, ಸೌತಾಂಪ್ಟನ್ ವಿಶ್ವವಿದ್ಯಾಲಯದ ಕಂಪ್ಯೂಟರ್ ವಿಜ್ಞಾನ ಪ್ರೊಫೆಸರ್ ಡೇಮ್ ವೆಂಡಿ ಹಾಲ್ ಅವರು ಆಡಳಿತ, ಒಳಗೊಳ್ಳುವಿಕೆ ಮತ್ತು ಉದ್ಯೋಗಿ ವರ್ಗದ ರೂಪಾಂತರದ ದೃಷ್ಟಿಕೋನದಿಂದ ಕೃತಕ ಬುದ್ಧಿಮತ್ತೆಯ ಭವಿಷ್ಯವನ್ನು ವಿಶ್ಲೇಷಿಸಿದರು. ಗ್ಲೋಬಲ್ ಸೌತ್ ಹಿನ್ನೆಲೆಯಲ್ಲಿ ಮಾತನಾಡಿದ ಅವರು, ಸುರಕ್ಷತಾ ಚೌಕಟ್ಟುಗಳು, ಸಮಾನ ಪ್ರವೇಶ ಮತ್ತು ಸಾರ್ವಭೌಮ ಸಾಮರ್ಥ್ಯದ ಮೇಲೆ ಆಧಾರಿತವಾಗಿರುವ “ಮಾನವಕುಲಕ್ಕಾಗಿ” ನಿರ್ಮಿಸಲಾದ AI ವ್ಯವಸ್ಥೆಗಳ ಅಗತ್ಯವನ್ನು ಪ್ರತಿಪಾದಿಸಿದರು. AI ಕಾರ್ಯತಂತ್ರಗಳು ರಾಷ್ಟ್ರೀಯ ಆದ್ಯತೆಗಳು, ಭಾಷಾ ವೈವಿಧ್ಯತೆ ಮತ್ತು ಸ್ಥಳೀಯ ದತ್ತಾಂಶ ಪರಿಸರ ವ್ಯವಸ್ಥೆಗಳನ್ನು ಪ್ರತಿಬಿಂಬಿಸಬೇಕು ಎಂದು ಒತ್ತಿ ಹೇಳಿದ ಅವರು, ದೀರ್ಘಕಾಲೀನ ಸಾಮಾಜಿಕ ಪ್ರಯೋಜನವನ್ನು ಖಚಿತಪಡಿಸುವ ಒಳಗೊಳ್ಳುವಿಕೆಯ ಅಭಿವೃದ್ಧಿ ಮಾದರಿಗಳ ಪ್ರಾಮುಖ್ಯತೆಯನ್ನು ಎತ್ತಿ ತೋರಿಸಿದರು. ಅವರ ಭಾಷಣವು ಎಚ್ಚರಿಕೆಯ ಆಶಾವಾದವನ್ನು ವ್ಯಕ್ತಪಡಿಸಿತು. ಸರ್ಕಾರಗಳು, ಸಂಶೋಧಕರು ಮತ್ತು ಯುವ ಸಂಶೋಧಕರು, ವಿಶೇಷವಾಗಿ ಉದಯೋನ್ಮುಖ ಆರ್ಥಿಕತೆಗಳಲ್ಲಿರುವವರು, AI ಅನ್ನು ಸ್ಥಳೀಯವಾಗಿ ಭದ್ರವಾಗಿರುವ, ಜಾಗತಿಕವಾಗಿ ಸಂಪರ್ಕ ಹೊಂದಿದ ಮತ್ತು ಮೂಲಭೂತವಾಗಿ ಎಲ್ಲರನ್ನೂ ಒಳಗೊಳ್ಳುವ ರೀತಿಯಲ್ಲಿ ರೂಪಿಸಲು ಅವರು ಕರೆ ನೀಡಿದರು.
ತಮ್ಮ ಪ್ರಧಾನ ಭಾಷಣದಲ್ಲಿ ಮಾಂಟ್ರಿಯಲ್ ವಿಶ್ವವಿದ್ಯಾಲಯದ ಕಂಪ್ಯೂಟರ್ ವಿಜ್ಞಾನ ಪ್ರೊಫೆಸರ್ ಯೋಶುವಾ ಬೆಂಜಿಯೊ ಅವರು, ಹೆಚ್ಚುತ್ತಿರುವ ಸಾಮರ್ಥ್ಯವುಳ್ಳ ಮತ್ತು ಸ್ವತಂತ್ರವಾಗಿ ಕಾರ್ಯನಿರ್ವಹಿಸುವ AI ವ್ಯವಸ್ಥೆಗಳಿಗೆ ಸಂಬಂಧಿಸಿದ ಅಪಾಯಗಳ ಮೇಲೆ ಬೆಳಕು ಚೆಲ್ಲಿದರು. ಮುಖ್ಯವಾಗಿ ವಿಶೇಷವಾಗಿ ಗುರಿಗಳ ನಡುವಿನ ಅಸಮತೋಲನ, ವಂಚನೆಯ ನಡವಳಿಕೆ ಮತ್ತು ಅಪಾಯಗಳನ್ನು ತಡೆಗಟ್ಟುವಲ್ಲಿನ ವಿಫಲತೆಯ ಬಗ್ಗೆ ಅವರು ಮಾತನಾಡಿದರು. AI ಸಾಮರ್ಥ್ಯಗಳಲ್ಲಿನ ಇತ್ತೀಚಿನ ಪ್ರಗತಿಯು ಪ್ರಸ್ತುತ ಇರುವ ಮೌಲ್ಯಮಾಪನ ಮತ್ತು ಸುರಕ್ಷತಾ ಕ್ರಮಗಳನ್ನು ಮೀರಿಸುತ್ತಿದೆ ಎಂದು ಅವರು ಎಚ್ಚರಿಸಿದರು. ಸೈಕೋಫಾನ್ಸಿ, ಪೂರ್ವಾಗ್ರಹ, ಜೈಲ್ ಬ್ರೇಕ್ ಗಳು, ಸೈಬರ್ ದುರುಪಯೋಗ ಮತ್ತು ಸ್ವಯಂ-ರಕ್ಷಣಾತ್ಮಕ ನಡವಳಿಕೆಯನ್ನು ಪ್ರದರ್ಶಿಸುವ AI ವ್ಯವಸ್ಥೆಗಳ ಬಗ್ಗೆ ಅವರು ಕಳವಳ ವ್ಯಕ್ತಪಡಿಸಿದರು.
ಪ್ರಸ್ತುತ ತರಬೇತಿ ವಿಧಾನಗಳ ಅನಿರೀಕ್ಷಿತ ಅಡ್ಡಪರಿಣಾಮಗಳಿಂದಾಗಿ ಇಂತಹ ಅಸಮತೋಲನದ ಸವಾಲುಗಳು ಹೆಚ್ಚಾಗಿ ಉದ್ಭವಿಸುತ್ತವೆ ಎಂದು ಒತ್ತಿಹೇಳಿದ ಪ್ರೊ. ಬೆಂಗಿಯೋ ಅವರು, AI ವಿನ್ಯಾಸದಲ್ಲಿ ಮೂಲಭೂತ ಬದಲಾವಣೆಯ ಅಗತ್ಯವಿದೆ ಎಂದು ಕರೆ ನೀಡಿದರು. ಗುರಿ-ಚಾಲಿತ ಮತ್ತು ಮಾನವರನ್ನು ಅನುಕರಿಸುವ ವ್ಯವಸ್ಥೆಗಳಿಂದ ದೂರ ಸರಿದು, ವೈಜ್ಞಾನಿಕ ತರ್ಕದ ಮೇಲೆ ಆಧಾರಿತವಾದ ಮಾದರಿಗಳತ್ತ ನಾವು ಸಾಗಬೇಕು ಎಂದು ಅವರು ಪ್ರತಿಪಾದಿಸಿದರು.
ಕೊನೆಯದಾಗಿ, ತಮ್ಮ ಪ್ರಮುಖ ಭಾಷಣದಲ್ಲಿ, ಎಎಂಐ ಲ್ಯಾಬ್ಸ್ ನ (AMI Labs) ಕಾರ್ಯನಿರ್ವಾಹಕ ಅಧ್ಯಕ್ಷರು ಮತ್ತು ನ್ಯೂಯಾರ್ಕ್ ವಿಶ್ವವಿದ್ಯಾಲಯದ ಕಂಪ್ಯೂಟರ್ ವಿಜ್ಞಾನದ ಪ್ರಾಧ್ಯಾಪಕರಾದ ಡಾ. ಯಾನ್ ಲೆಕುನ್ ಅವರು, ಕೃತಕ ಸಾಮಾನ್ಯ ಬುದ್ಧಿಮತ್ತೆ (AGI) ಕುರಿತಾದ ಪ್ರಚಲಿತ ವಾದಗಳನ್ನು ಸವಾಲು ಮಾಡಿದರು. ಬೃಹತ್ ಭಾಷಾ ಮಾದರಿಗಳನ್ನು (LLM) ಒಳಗೊಂಡಂತೆ ಪ್ರಸ್ತುತ ಇರುವ AI ವ್ಯವಸ್ಥೆಗಳು ಮಾನವ ಮಟ್ಟದ ಬುದ್ಧಿಮತ್ತೆಯಿಂದ ಇನ್ನೂ ಬಹಳ ದೂರದಲ್ಲಿವೆ ಎಂದು ಅವರು ವಾದಿಸಿದರು. ಭಾಷೆ ಮತ್ತು ನಿರ್ದಿಷ್ಟ ವಲಯದ ಕಾರ್ಯಗಳಲ್ಲಿ ಅವುಗಳ ಅದ್ಭುತ ಪ್ರದರ್ಶನವನ್ನು ಒಪ್ಪಿಕೊಳ್ಳುತ್ತಲೇ, ಅವುಗಳ ಮೂಲಭೂತ ಮಿತಿಗಳನ್ನು ಅವರು ಒತ್ತಿ ಹೇಳಿದರು: ಭೌತಿಕ ಪ್ರಪಂಚದ ಬಗ್ಗೆ ನಿಜವಾದ ತಿಳುವಳಿಕೆಯ ಕೊರತೆ, ಶಾಶ್ವತ ಸ್ಮರಣೆಯ ಅಭಾವ, ದುರ್ಬಲ ದೀರ್ಘಕಾಲೀನ ಯೋಜನಾ ಸಾಮರ್ಥ್ಯಗಳು ಮತ್ತು ಸಾಕಷ್ಟು ದೃಢವಾಗಿಲ್ಲದ ಸುರಕ್ಷತಾ ನಿಯಂತ್ರಣಗಳ ಬಗ್ಗೆ ಅವರು ವಿವರಿಸಿದರು.
ಈ ಮಿತಿಗಳನ್ನು ಮೆಟ್ಟಿ ನಿಲ್ಲಲು, ಡಾ. ಲೆಕುನ್ ಅವರು ‘ವಿಶ್ವ ಮಾದರಿಗಳನ್ನು’ ಅಭಿವೃದ್ಧಿಪಡಿಸುವತ್ತ ಬದಲಾವಣೆ ತರಲು ಪ್ರಸ್ತಾಪಿಸಿದರು. ಇವು ನಮ್ಮ ಕ್ರಿಯೆಗಳಿಗೆ ಪ್ರತಿಕ್ರಿಯೆಯಾಗಿ ಪರಿಸರವು ಹೇಗೆ ಬದಲಾಗುತ್ತದೆ ಎಂಬುದನ್ನು ಊಹಿಸಬಲ್ಲ ಮುನ್ಸೂಚನಾ ವ್ಯವಸ್ಥೆಗಳಾಗಿವೆ. ಇಂತಹ ವ್ಯವಸ್ಥೆಗಳು AIಗೆ ಸಂಭವನೀಯ ಪರಿಣಾಮಗಳನ್ನು ಮುನ್ಸೂಚಿಸಲು, ಪರಿಣಾಮಕಾರಿಯಾಗಿ ಯೋಜಿಸಲು ಮತ್ತು ನಿರ್ದಿಷ್ಟ ಸುರಕ್ಷತಾ ನಿಯಮಗಳ ಅಡಿಯಲ್ಲಿ ಕಾರ್ಯನಿರ್ವಹಿಸಲು ಅನುವು ಮಾಡಿಕೊಡುತ್ತವೆ. ಇದರಿಂದ AI ಅನ್ನು ಹೆಚ್ಚು ನಿಯಂತ್ರಿಸಬಹುದು ಮತ್ತು ಮಾನವ ಉದ್ದೇಶಗಳೊಂದಿಗೆ ಸುಲಭವಾಗಿ ಹೊಂದಿಸಬಹುದು ಎಂದು ಅವರು ವಾದಿಸಿದರು.
‘AI ಮತ್ತು ಅದರ ಪ್ರಭಾವ’ ಕುರಿತ ಸಂಶೋಧನಾ ವಿಚಾರಗೋಷ್ಠಿಯು ಮುಕ್ತಾಯಗೊಳ್ಳುತ್ತಿದ್ದಂತೆ, ಅಲ್ಲಿ ನಡೆದ ಚರ್ಚೆಗಳು ಕೃತಕ ಬುದ್ಧಿಮತ್ತೆಯ ಕ್ಷಿಪ್ರ ಪ್ರಗತಿಯೊಂದಿಗೆ ಬರುವ ಅಸಾಧಾರಣ ಭರವಸೆ ಮತ್ತು ಗಂಭೀರ ಜವಾಬ್ದಾರಿ ಎರಡನ್ನೂ ಪ್ರತಿಬಿಂಬಿಸಿದವು. ವೈಜ್ಞಾನಿಕ ಅನ್ವೇಷಣೆ ಮತ್ತು ಜಾಗತಿಕ ಆಡಳಿತದಿಂದ ಹಿಡಿದು ಸುರಕ್ಷತೆ ಮತ್ತು ಮುಂದಿನ ಪೀಳಿಗೆಯ ವಿನ್ಯಾಸಗಳವರೆಗೆ, ಈ ವಿಚಾರಗೋಷ್ಠಿಯು ಒಂದು ಹಂಚಿಕೆಯ ಹೊಣೆಗಾರಿಕೆಯನ್ನು ಒತ್ತಿಹೇಳಿತು: ಕೇವಲ ಶಕ್ತಿಯುತವಾಗಿರುವುದು ಮಾತ್ರವಲ್ಲದೆ, ನಂಬಲರ್ಹ, ಒಳಗೊಳ್ಳುವ ಮತ್ತು ಮಾನವ ಮೌಲ್ಯಗಳೊಂದಿಗೆ ದೃಢವಾಗಿ ಹೊಂದಿಕೊಂಡಿರುವ AI ವ್ಯವಸ್ಥೆಗಳನ್ನು ರೂಪಿಸುವುದು ಅತ್ಯಗತ್ಯ.
Source : PIB

