ಪ್ರವಾಸೋದ್ಯಮ ಸಚಿವಾಲಯದಿಂದ ಬೆಂಗಳೂರಿನ ಇನ್ಸ್ ಟಿಟ್ಯೂಟ್ ಆಫ್ ಹೋಟೆಲ್ ಮ್ಯಾನೇಜ್ಮೆಂಟ್ (ಐಎಚ್‌ಎಂ) ನಲ್ಲಿ “ದೇಖೋ ಅಪ್ನಾ ದೇಶ್” ಶಾಲಾ ಸ್ಪರ್ಧೆಯ ಬಹುಮಾನ ವಿತರಣೆ ಮತ್ತು ಪ್ರವಾಸೋದ್ಯಮ ಶಿಕ್ಷಣ ಕಾರ್ಯಕ್ರಮ ಆಯೋಜನೆ

0
2

ಭಾರತ ಸರ್ಕಾರದ ಪ್ರವಾಸೋದ್ಯಮ ಸಚಿವಾಲಯವು ತನ್ನ ಬೆಂಗಳೂರಿನ ಕಚೇರಿಯ ಮೂಲಕ, ಬೆಂಗಳೂರಿನ ಹೋಟೆಲ್ ಮ್ಯಾನೇಜ್‌ಮೆಂಟ್ ಸಂಸ್ಥೆಯ (ಐ ಎಚ್ ಎಂ) ಸಹಯೋಗದೊಂದಿಗೆ, ದೇಖೋ ಅಪ್ನಾ ದೇಶ್ (ಡಿಎಡಿ) ಶಾಲಾ ಕರಪತ್ರ ಸ್ಪರ್ಧೆಯ ಬಹುಮಾನ ವಿತರಣಾ ಸಮಾರಂಭ ಮತ್ತು ಪ್ರವಾಸೋದ್ಯಮ ಶಿಕ್ಷಣ ಕಾರ್ಯಕ್ರಮವನ್ನು ಇಂದು ಐಎಚ್‌ಎಂನ ಬೆಂಗಳೂರು ಆವರಣದಲ್ಲಿ ಯಶಸ್ವಿಯಾಗಿ ಆಯೋಜಿಸಿತು.

ಸ್ಥಳೀಯ ತಾಣಗಳು, ಸಂಸ್ಕೃತಿ, ಪರಂಪರೆ, ಕರಕುಶಲ ವಸ್ತುಗಳು, ಪಾಕಪದ್ಧತಿ ಮತ್ತು ನೈಸರ್ಗಿಕ ಆಕರ್ಷಣೆಗಳನ್ನು ಪ್ರದರ್ಶಿಸುವ ಕೈಬರಹದ ಕರಪತ್ರಗಳ ಮೂಲಕ ಭಾರತದ ಪ್ರವಾಸೋದ್ಯಮ ಸಾಮರ್ಥ್ಯವನ್ನು ಸೃಜನಾತ್ಮಕವಾಗಿ ಅನ್ವೇಷಿಸಲು ಮತ್ತು ಪ್ರಸ್ತುತಪಡಿಸಲು ಶಾಲಾ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಗುರಿಯನ್ನು ಹೊಂದಿರುವ ಪ್ರವಾಸೋದ್ಯಮ ಸಚಿವಾಲಯದ ಉಪಕ್ರಮವಾದ “ದೇಖೋ ಅಪ್ನಾ ದೇಶ್ ಶಾಲೆಗಳ ಸ್ಪರ್ಧೆ”ಯಡಿಯಲ್ಲಿ ವಿದ್ಯಾರ್ಥಿಗಳ ಅತ್ಯುತ್ತಮ ಪ್ರಸ್ತುತಿಗಳಿಗೆ ಇಂದು ಬೆಳಗ್ಗೆ ನಡೆದ ಸಮಾರಂಭದಲ್ಲಿ ಬಹುಮಾನ ವಿತರಿಸಲಾಯಿತು.

ದಕ್ಷಿಣ ಭಾರತ ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ ಗಳ ಸಂಘದ ಅಧ್ಯಕ್ಷರಾದ ಶ್ರೀ ಶ್ಯಾಮರಾಜು, ಕರ್ನಾಟಕ ಪ್ರವಾಸೋದ್ಯಮ ಸಂಘದ ಕಾರ್ಯದರ್ಶಿ ಶ್ರೀ ಎಚ್ ಜಗದೀಶ್, ರೆನೈಸಾನ್ಸ್ ಹೋಟೆಲ್ ಬೆಂಗಳೂರಿನ ಪ್ರಧಾನ ವ್ಯವಸ್ಥಾಪಕರಾದ ಶ್ರೀಮತಿ ಸೀತಾಲಕ್ಷ್ಮೀ ಮತ್ತು ಬೆಂಗಳೂರಿನ ಇಂಡಿಯಾಟೂರಿಸಂ ನಿರ್ದೇಶಕರಾದ ಶ್ರೀಮತಿ ಸಂಧ್ಯಾ ಹರಿದಾಸ್ ಬೆಳಗ್ಗೆ ನಡೆದ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಸಮಾರೋಪ ಸಮಾರಂಭದಲ್ಲಿ ಇಂಡಿಯನ್ ಹೋಟೆಲ್ಸ್ ಕಂಪನಿ ಲಿಮಿಟೆಡ್‌ ನ ಕಲಿಕೆ ಮತ್ತು ಅಭಿವೃದ್ಧಿ (ದಕ್ಷಿಣ) ವಲಯ ನಿರ್ದೇಶರಾದ ಶ್ರೀಮತಿ ರಶ್ಮಿ ಪ್ರಸಾದ್, ದಿ ಪಾರ್ಕ್ ಬೆಂಗಳೂರಿನ ಪ್ರಧಾನ ವ್ಯವಸ್ಥಾಪಕರಾದ ಶ್ರೀ ಕಿರೋಣ್ ಕುಮಾರ್ ಮತ್ತು ಐಟಿಸಿ ಗಾರ್ಡೇನಿಯಾದ ಚೆಫ್ ಶ್ರೀಮತಿ ವಂಶಿತಾಮಲ್ಲು ಉಪಸ್ಥಿತರಿದ್ದರು.

ಪ್ರವಾಸೋದ್ಯಮ ಶಿಕ್ಷಣ ಕಾರ್ಯಕ್ರಮದ ಭಾಗವಾಗಿ, ಎಂಟರಿಂದ ಹನ್ನೊಂದನೇ ತರಗತಿಯವರೆಗಿನ ವಿದ್ಯಾರ್ಥಿಗಳು ವೃತ್ತಿ ಸಮಾಲೋಚನೆ, ರಸಪ್ರಶ್ನೆ, ಬೆಂಕಿಯಿಲ್ಲದ ಅಡುಗೆ, ಕಪ್‌ ಕೇಕ್ ಅಲಂಕಾರ ಮತ್ತು ಚಿತ್ರಕಲಾ ಸ್ಪರ್ಧೆಗಳು ಸೇರಿದಂತೆ ಹಲವು ಪ್ರಯೋಗಾತ್ಮಕ ಮತ್ತು ಸಂವಾದಾತ್ಮಕ ಚಟುವಟಿಕೆಗಳಲ್ಲಿ ಭಾಗವಹಿಸಿದರು. ಪ್ರಮುಖ ಪ್ರವಾಸೋದ್ಯಮ ಮತ್ತು ಆತಿಥ್ಯ ಸಂಸ್ಥೆಗಳ ಅಧ್ಯಾಪಕರು ಮತ್ತು ವೃತ್ತಿಪರರೊಂದಿಗೆ ಮಾರ್ಗದರ್ಶನಾತ್ಮಕ ಸಂವಾದಗಳಲ್ಲಿ ವಿದ್ಯಾರ್ಥಿಗಳು ತೊಡಗಿಕೊಂಡರು.  ಪ್ರವಾಸೋದ್ಯಮ, ಆತಿಥ್ಯ ನಿರ್ವಹಣೆ, ಪಾಕ ಕಲೆಗಳು ಮತ್ತು ಪ್ರವಾಸೋದ್ಯಮ ಸೇವೆಗಳಲ್ಲಿ ವೈವಿಧ್ಯಮಯ ವೃತ್ತಿ ಅವಕಾಶಗಳನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುವ ಗುರಿಯನ್ನು ಈ ಚಟುವಟಿಕೆಗಳು ಹೊಂದಿದ್ದವು.

ಬೆಂಗಳೂರಿನ ಇನ್‌ಸ್ಟಿಟ್ಯೂಟ್ ಆಫ್ ಹೋಟೆಲ್ ಮ್ಯಾನೇಜ್‌ಮೆಂಟ್, ಭಾರತೀಯ ಪಾಕಶಾಲಾ ಸಂಸ್ಥೆ, ಭಾರತೀಯ ಪ್ರವಾಸೋದ್ಯಮ ಮತ್ತು ಪ್ರಯಾಣ ನಿರ್ವಹಣಾ ಸಂಸ್ಥೆಗಳು ಆತಿಥ್ಯ ವಲಯದಲ್ಲಿನ ಕೋರ್ಸ್‌ ಗಳು, ತರಬೇತಿ ಅವಕಾಶಗಳು ಮತ್ತು ವೃತ್ತಿ ಅವಕಾಶಗಳ ಕುರಿತು ಮಾಹಿತಿ ಒದಗಿಸುವ ಮೂಲಕ ಕಾರ್ಯಕ್ರಮಕ್ಕೆ ಕೊಡುಗೆ ನೀಡಿವೆ.

ಈ ಕಾರ್ಯಕ್ರಮದಲ್ಲಿ ಸುಮಾರು 110 ಶಾಲಾ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಸಾಂಸ್ಥಿಕ ಪ್ರತಿನಿಧಿಗಳು ಉತ್ಸಾಹದಿಂದ ಭಾಗವಹಿಸಿದ್ದರು.

ಪ್ರವಾಸೋದ್ಯಮ, ಆತಿಥ್ಯ ಮತ್ತು ಸಂಬಂಧಿತ ವಲಯಗಳಲ್ಲಿನ ವೃತ್ತಿ ಅವಕಾಶಗಳ ಬಗ್ಗೆ ಜಾಗೃತಿ ಮೂಡಿಸಲು ಈ ಕಾರ್ಯಕ್ರಮವನ್ನು ವಿನ್ಯಾಸಗೊಳಿಸಲಾಗಿದೆ. ಸಂವಾದ ಕಾರ್ಯಕ್ರಮಗಳು, ಪ್ರವಾಸೋದ್ಯಮ ಶಿಕ್ಷಣ ಮಾರ್ಗಗಳ ಅಭಿಶಿಕ್ಷಣ ಹಾಗೂ ಆತಿಥ್ಯ ಮತ್ತು ಪ್ರಯಾಣ ಪರಿಸರ ವ್ಯವಸ್ಥೆಯಲ್ಲಿ ಲಭ್ಯವಿರುವ ವೈವಿಧ್ಯಮಯ ಅವಕಾಶಗಳಿಗೆ ತೆರೆದುಕೊಳ್ಳುವ ಮೂಲಕ ವಿದ್ಯಾರ್ಥಿಗಳು ಈ ಕಾರ್ಯಕ್ರಮದ ಪ್ರಯೋಜನ ಪಡೆದರು. ಕಾರ್ಯಕ್ರಮದಲ್ಲಿ ಪಾಲ್ಗೊಂಡ ಎಲ್ಲಾ ವಿದ್ಯಾರ್ಥಿಗಳಿಗೆ ಭಾಗವಹಿಸುವಿಕೆ ಪ್ರಮಾಣಪತ್ರ ವಿತರಿಸಲಾಯಿತು. “ದೇಖೋ ಅಪ್ನಾ ದೇಶ್” ಉಪಕ್ರಮದ ಮೂಲಕ ಸಚಿವಾಲಯವು ಸಾಮರ್ಥ್ಯ ವೃದ್ಧಿ ಮತ್ತು ಆರಂಭಿಕ ವೃತ್ತಿಜೀವನ ಸಂವೇದನೆಗೆ ತನ್ನ  ಬದ್ಧತೆ ಬಲಪಡಿಸಿದೆ ಮತ್ತು ಈ ಕಾರ್ಯಕ್ರಮವು ಭಾರತದ ಶ್ರೀಮಂತ ಪ್ರವಾಸೋದ್ಯಮ ಪರಂಪರೆಯ ಬಗ್ಗೆ ಹೆಮ್ಮೆ ಮೂಡಿಸಲಿದೆ.

ಪ್ರವಾಸೋದ್ಯಮ ಸಚಿವಾಲಯವು ದೇಶಾದ್ಯಂತದ ಶಿಕ್ಷಣ ಸಂಸ್ಥೆಗಳನ್ನು ತೊಡಗಿಸಿಕೊಳ್ಳುವ ಮೂಲಕ, ಯುವ ಮನಸ್ಸುಗಳು ಭಾರತವನ್ನು ಅನ್ವೇಷಿಸಲು ಹಾಗೂ ಪ್ರವಾಸೋದ್ಯಮ ಮತ್ತು ಆತಿಥ್ಯ ವಲಯವನ್ನು ಲಾಭದಾಯಕ ವೃತ್ತಿ ಆಯ್ಕೆಯಾಗಿ ಪರಿಗಣಿಸಲು ಪ್ರೇರೇಪಿಸುತ್ತಿದೆ.

Source : PIB