ಭಾರತದ ಕೃತಕ ಬುದ್ಧಿಮತ್ತೆಯ ಕ್ಷಣ: ವಾರ್ತಾ ಮತ್ತು ಪ್ರಸಾರ ಸಚಿವಾಲಯದ ʻಪೆವಿಲಿಯನ್‌ʼನಲ್ಲಿ ಸರ್ಕಾರ, ನವೋದ್ಯಮಗಳು ಮತ್ತು ಕ್ರಿಯೇಟರ್‌ಗಳ ಸಮಾಗಮ

0
3

ʻಭಾರತ ಎಐ ಪರಿಣಾಮ ಶೃಂಗಸಭೆ-2026ʼರಲ್ಲಿ ಸ್ಥಾಪಿಸಲಾಗುವ ವಾರ್ತಾ ಮತ್ತು ಪ್ರಸಾರ ಸಚಿವಾಲಯದ (ಎಂಒಐಬಿ) ಪ್ರದರ್ಶನ ಕೇಂದ್ರವು (ಪೆವಿಲಿಯನ್‌) ಭಾರತದ ಎಐ ಸಾಮರ್ಥ್ಯಗಳು, ನವೋದ್ಯಮಗಳ ಆಳವನ್ನು ಅನಾವರಣಗೊಳಿಸಲಿದೆ


ವಿಕಸನಗೊಳ್ಳುತ್ತಿರುವ ಕೃತಕ ಬುದ್ಧಿಮತ್ತೆ (ಎಐ) ವಲಯದಲ್ಲಿ ಭಾರತವು ಪ್ರಮುಖ ಜಾಗತಿಕ ಧ್ವನಿಯಾಗಿ ತನ್ನನ್ನು ತಾನು ಬಿಂಬಿಸಿಕೊಳ್ಳುತ್ತಿದೆ. ಈ ಸಮಯದಲ್ಲಿ, ವಾರ್ತಾ ಮತ್ತು ಪ್ರಸಾರ ಸಚಿವಾಲಯ (ಎಂಒಐಬಿ) ʻಭಾರತ ಎಐ ಪರಿಣಾಮ ಶೃಂಗಸಭೆ-2026ʼ ರಲ್ಲಿ ವಿಶೇಷ ಪೆವಿಲಿಯನ್ (ಪ್ರದರ್ಶನ ಕೇಂದ್ರ) ಅನ್ನು ಸ್ಥಾಪಿಸಿದೆ. ಭಾರತದ ಬೆಳೆಯುತ್ತಿರುವ ತಾಂತ್ರಿಕ ಸಾಮರ್ಥ್ಯಗಳು, ನವೋದ್ಯಮಗಳ ಆಳ ಮತ್ತು ಜವಾಬ್ದಾರಿಯುತ ಕೃತಕ ಬುದ್ಧಿಮತ್ತೆ ಅಳವಡಿಕೆಗಾಗಿ ನೀತಿ-ಆಧರಿತ ದೃಷ್ಟಿಕೋನವನ್ನು ಎತ್ತಿ ತೋರಿಸಲು ಇದು ವೇದಿಕೆಯನ್ನು ಒದಗಿಸುತ್ತದೆ.

ʻವೇವ್ಸ್ ಕ್ರಿಯೇಟರ್ಸ್ ಕಾರ್ನರ್ʼ ಅನ್ನು ಹೊಂದಿರುವ ʻಪೆವಿಲಿಯನ್ʼ ಅನ್ನು ಮಾಧ್ಯಮ ಮತ್ತು ಸಂವಾದ ಸ್ಥಳವಾಗಿ ವಿನ್ಯಾಸಗೊಳಿಸಲಾಗಿದೆ. ಅಲ್ಲಿ ನೀತಿ ನಿರೂಪಕರು, ನವೋದ್ಯಮಗಳು, ಕ್ರಿಯೇಟರ್‌ಗಳು ಮತ್ತು ಉದ್ಯಮದ ಮುಖಂಡರು ಒಟ್ಟುಗೂಡಿ ಕೃತಕ ಬುದ್ಧಿಮತ್ತೆಯನ್ನು ಭಾರತದ ಅಭಿವೃದ್ಧಿ ಆದ್ಯತೆಗಳು, ಸಾಂಸ್ಕೃತಿಕ ವೈವಿಧ್ಯತೆ ಮತ್ತು ರಾಷ್ಟ್ರೀಯ ಭದ್ರತಾ ಪರಿಗಣನೆಗಳೊಂದಿಗೆ ಹೇಗೆ ಜೋಡಿಸಬಹುದು ಎಂಬುದನ್ನು ಚರ್ಚಿಸಲಿದ್ದಾರೆ.

ಈ ʻಪೆವಿಲಿಯನ್ʼ ಭಾರತದ ಎಐ ಪರಿಸರ ವ್ಯವಸ್ಥೆಯನ್ನು ಕೇವಲ ಜಾಗತಿಕ ತಂತ್ರಜ್ಞಾನದ ಗ್ರಾಹಕನಾಗಿ ಮಾತ್ರವಲ್ಲದೆ ಸ್ಥಳೀಯ, ದೊಡ್ಡ ಪ್ರಮಾಣದ ಮತ್ತು ಸಾಮಾಜಿಕವಾಗಿ ಪ್ರಸ್ತುವೆನಿಸುವ ಎಐ ಪರಿಹಾರಗಳ ಸೃಷ್ಟಿಕರ್ತನಾಗಿ ಬಿಂಬಿಸುವ ಗುರಿಯನ್ನು ಹೊಂದಿದೆ ಎಂದು ಈ ಉಪಕ್ರಮದ ಬಗ್ಗೆ ತಿಳಿದಿರುವ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಭಾರತೀಯ ಕೃತಕ ಬುದ್ಧಿಮತ್ತೆ ನಾವೀನ್ಯತೆಯನ್ನು ಹೆಚ್ಚಿಸಲು ವೇದಿಕೆ

ವಾರ್ತಾ ಮತ್ತು ಪ್ರಸಾರ ಸಚಿವಾಲಯದ ʻಪೆವಿಲಿಯನ್ʼ ಆರೋಗ್ಯ ರಕ್ಷಣೆ, ಮಾಧ್ಯಮ, ಕಂಟಂಟ್‌, ಆಡಳಿತ ಮತ್ತು ಸಾಮಾಜಿಕ ಪ್ರಭಾವದಂತಹ ಕ್ಷೇತ್ರಗಳಲ್ಲಿ ಕೆಲಸ ಮಾಡುವ ಭಾರತೀಯ ನವೋದ್ಯಮಗಳು ಮತ್ತು ಉದ್ಯಮಿಗಳಿಗೆ ವೇದಿಕೆ ಒದಗಿಸುತ್ತದೆ. ಉತ್ಕೃಷ್ಟ ಆಯ್ಕೆಯ ಸಂಭಾಷಣೆಗಳು ಮತ್ತು ಸಂಸ್ಥಾಪಕರ ನೇತೃತ್ವದ ಚರ್ಚೆಗಳ ಮೂಲಕ, ಈ ʻಪೆವಿಲಿಯನ್ʼ ದೇಶೀಯ ಮತ್ತು ಜಾಗತಿಕ ಮಾರುಕಟ್ಟೆಗಳಿಗೆ ಕೃತಕ ಬುದ್ಧಿಮತ್ತೆ ಉತ್ಪನ್ನಗಳನ್ನು ನಿರ್ಮಿಸುವ ಭಾರತೀಯ ಕಂಪನಿಗಳಿಗೆ ಗೋಚರತೆಯನ್ನು ನೀಡಲು ಪ್ರಯತ್ನಿಸುತ್ತದೆ.

“ಭಾರತೀಯ ಎಐ ನಾವೀನ್ಯತೆಯನ್ನು ಜಾಗತಿಕವಾಗಿ ನೋಡುವುದು, ಅರ್ಥಮಾಡಿಕೊಳ್ಳುವುದು ಮತ್ತು ಸಂದರ್ಭೋಚಿತಗೊಳಿಸುವುದನ್ನು ಖಚಿತಪಡಿಸಿಕೊಳ್ಳುವುದು ಇದರ ಉದ್ದೇಶವಾಗಿದೆ,” ಎಂದು ಅಧಿಕಾರಿಯೊಬ್ಬರು ಹೇಳಿದರು. ನವೋದ್ಯಮಗಳು ಮತ್ತು ನೀತಿ ನಿರೂಪಕರು, ಹೂಡಿಕೆದಾರರು ಹಾಗೂ ಅಂತರರಾಷ್ಟ್ರೀಯ ಪ್ರತಿನಿಧಿಗಳ ನಡುವೆ ಈ ʻಪೆವಿಲಿಯನ್ʼ ನೇರ ಸಂವಹನವನ್ನು ಸೃಷ್ಟಿಸುತ್ತದೆ ಎಂದು ಅವರು ತಿಳಿಸಿದರು.

ವೇವ್ಸ್ ಕ್ರಿಯೇಟರ್ಸ್ ಕಾರ್ನರ್, ಈ ʻಪೆವಿಲಿಯನ್ʼನ ಯೋಜನೆ ರೂಪಿಸುವಿಕೆಯ ಕೇಂದ್ರಬಿಂದುವಾಗಿದೆ. ಇದು ರಚನಾತ್ಮಕ ಸಂವಾದಗಳು, ʻಫೈರ್ ಸೈಡ್ ಚಾಟ್ʼಗಳು ಮತ್ತು ಸ್ಟಾರ್ಟ್ ಅಪ್ ಪ್ರದರ್ಶನಗಳ ಸರಣಿಯನ್ನು ಆಯೋಜಿಸುತ್ತದೆ. ಎಲ್ಲಾ ಅಧಿವೇಶನಗಳನ್ನು ಪ್ರಸಾರ  ಭಾರತಿಯ ಡಿಜಿಟಲ್ ವೇದಿಕೆ ʻವೇವ್ಸ್ ಒಟಿಟಿʼಯಲ್ಲಿ ನೇರ ಪ್ರಸಾರ ಮಾಡಲಾಗುವುದು. ಇದು ಶೃಂಗಸಭೆಯ ಸ್ಥಳವನ್ನು ಮೀರಿ ಪ್ರೇಕ್ಷಕರಿಗೆ ಪ್ರವೇಶವನ್ನು ವಿಸ್ತರಿಸುತ್ತದೆ.

ನವೋದ್ಯಮ ಕೇಂದ್ರಿತ ಯೋಜನೆಯನ್ನು ಅನ್ನು ʻಯುವರ್‌ಸ್ಟೋರಿʼ ಸಂಸ್ಥೆಯು ನಿರ್ವಹಿಸುತ್ತದೆ.

ʻಪೆವಿಲಿಯನ್‌ʼನಲ್ಲಿನ ನವೋದ್ಯಮ ಮತ್ತು ನಾವೀನ್ಯತೆ ನಿರೂಪಣೆಯನ್ನು ʻಯುವರ್ ಸ್ಟೋರಿʼ ನಡೆಸಿಕೊಡಲಿದೆ. ಉದಯೋನ್ಮುಖ ಸಂಸ್ಥಾಪಕರು, ಕೃತಕ ಬುದ್ಧಿಮತ್ತೆಯಲ್ಲಿನ ಮಹಿಳಾ ನಾಯಕರು ಹಾಗೂ ʻಭಾರತ್ʼ ಮತ್ತು ಶ್ರೇಣಿ -2 ಮತ್ತು ಶ್ರೇಣಿ -3 ಮಾರುಕಟ್ಟೆಗಳಿಗೆ ಪರಿಹಾರಗಳನ್ನು ನಿರ್ಮಿಸುವ ಕಂಪನಿಗಳನ್ನು ಗುರುತಿಸಲು ಶೃಂಗಸಭೆಯಾದ್ಯಂತ ಅನೇಕ ಅಧಿವೇಶನಗಳನ್ನು ಸಂಸ್ಥೆಯು ನಿರೂಪಿಸುತ್ತಿದೆ.

ಸಂಸ್ಥಾಪಕಿ ಮತ್ತು ಸಿಇಒ ಶ್ರದ್ಧಾ ಶರ್ಮಾ ಅವರು  ʻಎಐʼ ಸಾರ್ವಭೌಮತ್ವ, ಸಾಮಾಜಿಕ ಪರಿಣಾಮದ ನವೋದ್ಯಮಗಳು ಹಾಗೂ ಸಂಸ್ಥಾಪಕರ ನೇರ ಮಾತುಗಳು ಸೇರಿದಂತೆ ಹಲವಾರು ಸಂವಾದಗಳನ್ನು ನಿರ್ವಹಿಸಲಿದ್ದಾರೆ.

ಸರ್ಕಾರಿ ʻಪೆವಿಲಿಯನ್ʼನಲ್ಲಿ ನವೋದ್ಯಮ-ಕೇಂದ್ರಿತ ಮಾಧ್ಯಮ ವೇದಿಕೆಯ ಉಪಸ್ಥಿತಿಯು ಭಾರತವು ತನ್ನ ನಾವೀನ್ಯತೆಯ ಕಥೆಯನ್ನು ಹೇಗೆ ಪ್ರಸ್ತುತಪಡಿಸುತ್ತಿದೆ ಎಂಬುದರಲ್ಲಿ ಬದಲಾವಣೆಯನ್ನು ಸೂಚಿಸುತ್ತದೆ ಎಂದು ಉದ್ಯಮ ವೀಕ್ಷಕರು ಅಭಿಪ್ರಾಯಪಟ್ಟಿದ್ದಾರೆ..

ಎಂಒಐಬಿ ಪೆವಿಲಿಯನ್‌ನಲ್ಲಿ ಕಾರ್ಯಕ್ರಮಗಳ ದಿನವಾರು ವೇಳಾಪಟ್ಟಿ

ಸೋಮವಾರ, ಫೆಬ್ರವರಿ 16

ನಿಗದಿತ ಉನ್ನತ ಮಟ್ಟದ ಕಾರ್ಯಕ್ರಮಗಳಿಂದಾಗಿ ಪ್ರವೇಶವನ್ನು ನಿರ್ಬಂಧಿಸಲಾಗಿದೆ.

  • ಮಧ್ಯಾಹ್ನ 12:00 – ಮಧ್ಯಾಹ್ನ 1:00

ಸಂವಾದ: ಮುಂಬರುವ ನವೋದ್ಯಮಗಳನ್ನು ಪ್ರದರ್ಶಿಸುವುದು (ಸೆಟ್ 1)

ಮೂರು ಎಐ ನವೋದ್ಯಮಗಳೊಂದಿಗೆ ನಿರೂಪಕರ ನೇತೃತ್ವದ ಸಂವಾದ.

  • ಮಧ್ಯಾಹ್ನ 3:00 – ಸಂಜೆ 4:00

ಸಂವಾದ: ಮುಂಬರುವ ನವೋದ್ಯಮಗಳ  ಪ್ರದರ್ಶನ (ಸೆಟ್ 2)

ಮಂಗಳವಾರ, ಫೆಬ್ರವರಿ 17

ಆಡಳಿತ, ಸಾರ್ವಭೌಮತ್ವ ಮತ್ತು ಭಾರತದ ಕೃತಕ ಬುದ್ಧಿಮತ್ತೆ ನೀತಿಯ ನಿರ್ದೇಶನದ ಮೇಲೆ ಗಮನ ಕೇಂದ್ರೀಕರಣ.

  • ಮಧ್ಯಾಹ್ನ 12:00 – ಮಧ್ಯಾಹ್ನ 12:30

ಫೈರ್ ಸೈಡ್ ಚಾಟ್: ಭಾರತದ ಎಐ ಸಮಯ

ಭಾರತದ ಕೃತಕ ಬುದ್ಧಿಮತ್ತೆ ವೇಗವನ್ನು ಉಳಿಸಿಕೊಳ್ಳುವ ಕುರಿತು ಸಚಿವಾಲಯದ ಕಾರ್ಯದರ್ಶಿಯೊಂದಿಗೆ ಶ್ರದ್ಧಾ ಶರ್ಮಾ ಸಂಭಾಷಣೆ.

  • ಮಧ್ಯಾಹ್ನ 1:00 – ಮಧ್ಯಾಹ್ನ 1:40

ಸಂವಾದ: ಎಐ ಮತ್ತು ಸಾರ್ವಭೌಮತ್ವ

ರಾಷ್ಟ್ರೀಯ ಭದ್ರತೆ, ದತ್ತಾಂಶ ನಿಯಂತ್ರಣ ಮತ್ತು ದೇಶೀಯ ಕೃತಕ ಬುದ್ಧಿಮತ್ತೆ ಅಭಿವೃದ್ಧಿಯ ಬಗ್ಗೆ ಚರ್ಚೆ.

  • ಮಧ್ಯಾಹ್ನ 3:00 – ಮಧ್ಯಾಹ್ನ 3:30

ಫೈರ್ ಸೈಡ್ ಚಾಟ್: ಕುಕು ಎಫ್‌ಎಂ

ಸ್ಥಳೀಯ ಭಾಷಾ ಕಂಟೆಂಟ್‌ ಮತ್ತು ಎಐ-ಚಾಲಿತ ವಿತರಣೆಯ ಬಗ್ಗೆ ಸಂಸ್ಥಾಪಕ ಲಾಲ್ ಚಂದ್ ಬಿಸು ಅವರ ಮಾತು.

  • ಸಂಜೆ 5:00 ರಿಂದ 6:00

ಭೂಮಿ ಪೆಡ್ನೇಕರ್ ಅವರೊಂದಿಗೆ ʻಫೈರ್ ಸೈಡ್ ಚಾಟ್ʼ

ಸಿನೆಮಾ, ಬೆಂಬಲ ಮತ್ತು ಉದಯೋನ್ಮುಖ ತಂತ್ರಜ್ಞಾನಗಳ ಬಗ್ಗೆ ಚರ್ಚೆ.

ಬುಧವಾರ, ಫೆಬ್ರವರಿ 18

ಎಲ್ಲರನ್ನೂ ಒಳಗೊಳ್ಳುವಿಕೆ ಮತ್ತು ಸಂಸ್ಥಾಪಕರ ಭಾಗವಹಿಸುವಿಕೆಯ ಮೇಲೆ ಚರ್ಚೆ.

  • ಮಧ್ಯಾಹ್ನ 1:00 – ಮಧ್ಯಾಹ್ನ 2:00

ಸಂವಾದ: ಮುಂಬರುವ ನವೋದ್ಯಮಗಳ ಪ್ರದರ್ಶನ  (ಸೆಟ್ 3)

  • ಮಧ್ಯಾಹ್ನ 3:00 – ಮಧ್ಯಾಹ್ನ 3:40

ಸಂವಾದ: ʻಎಐʼನಲ್ಲಿ ಮಹಿಳೆಯರು

ಮಹಿಳಾ ಸಂಸ್ಥಾಪಕರು ಮತ್ತು ಉದ್ಯಮದ ನಾಯಕರಿಂದ ನಾಯಕತ್ವ ಹಾಗೂ ನಾವೀನ್ಯತೆಯ ಬಗ್ಗೆ ಚರ್ಚೆ.

  • ಸಂಜೆ 4:30 – ಸಂಜೆ 6:00

ಎಸ್‌ ಎಸ್‌ ಜೊತೆ ನವೋದ್ಯಮಗಳ ನೇರ ಕಾರ್ಯಕ್ರಮ

ಸಂಸ್ಥಾಪಕರಿಂದ ಕ್ಷಿಪ್ರ ಎರಡು ನಿಮಿಷಗಳ ಮಾತು

ಗುರುವಾರ, ಫೆಬ್ರವರಿ 19

  • ನರೇಂದ್ರ ಮೋದಿ ಮತ್ತು ಇಮ್ಯಾನುಯೆಲ್ ಮ್ಯಾಕ್ರನ್ ಅವರ ನಿಗದಿತ ಭೇಟಿಯಿಂದಾಗಿ ಸಾರ್ವಜನಿಕರಿಗೆ ಪ್ರವೇಶವಿಲ್ಲ.

ಶುಕ್ರವಾರ, ಫೆಬ್ರವರಿ 20

ಪರಿಣಾಮ ಮತ್ತು ಭಾರತ-ಕೇಂದ್ರಿತ ನಾವೀನ್ಯತೆಯ ಮೇಲೆ ಗಮನ ಕೇಂದ್ರೀಕರಣ.

  • ಮಧ್ಯಾಹ್ನ 12:00 – ಮಧ್ಯಾಹ್ನ 1:00

ಸಂವಾದ: ಸಾಮಾಜಿಕವಾಗಿ ಪ್ರಭಾವ ಬೀರುವ ಎಐ ನವೋದ್ಯಮಗಳು

  • ಮಧ್ಯಾಹ್ನ 3:00

ಸಂವಾದ: ʻದಿ ಭಾರತ್ ಆಪರ್ಚುನಿಟಿʼ(ಭಾರತಕ್ಕೆ ಅವಕಾಶ)

2 ಮತ್ತು 3ನೇ ಶ್ರೇಣಿಯ ಭಾರತದ ನವೋದ್ಯಮಗಳು ಕೃತಕ ಬುದ್ಧಿಮತ್ತೆ ಪರಿಹಾರಗಳನ್ನು ನಿರ್ಮಿಸುತ್ತಿವೆ.

  • ಸಂಜೆ 4:00

ಸಂವಾದ: ಮುಂಬರುವ ನವೋದ್ಯಮಗಳ ಪ್ರದರ್ಶನ (ಸೆಟ್ 4)

ಜಾಗತಿಕ ಕೃತಕ ಬುದ್ಧಿಮತ್ತೆ ಸಂವಾದಕ್ಕಾಗಿ ಭಾರತಕ್ಕೆ ಸ್ಥಾನ ಭದ್ರಪಡಿಸುವುದು

ಸ್ಥಳೀಯ ಪ್ರಸ್ತುತತೆಯನ್ನು ಉಳಿಸಿಕೊಳ್ಳುವುದರ ಜೊತೆಗೆ ಭಾರತೀಯ ಕಂಪನಿಗಳನ್ನು ಜಾಗತಿಕ ಕೃತಕ ಬುದ್ಧಿಮತ್ತೆ ಚರ್ಚೆಗಳೊಂದಿಗೆ ಜೋಡಿಸುವುದು, ಶೃಂಗಸಭೆಯಲ್ಲಿ ಭಾಗವಹಿಸುವ ಅಂತಾರಾಷ್ಟ್ರೀಯ ಮಧ್ಯಸ್ಥಗಾರರು, ಹೂಡಿಕೆದಾರರು ಮತ್ತು ಸರ್ಕಾರಗಳೊಂದಿಗೆ ತೊಡಗಿಸಿಕೊಳ್ಳಲು ನವೋದ್ಯಮಗಳಿಗೆ ಅನುವು ಮಾಡಿಕೊಡುವುದು ʻಪೆವಿಲಿಯನ್‌ʼನ ವಿಶಾಲ ಉದ್ದೇಶವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನವೋದ್ಯಮಗಳು, ಕ್ರಿಯೇಟರ್ಸ್‌ ಮತ್ತು ನೀತಿ ನಿರೂಪಕರನ್ನು ಒಂದೇ ಸೂರಿನಡಿ ತರುವ ಮೂಲಕ, ʻಎಂಒಐಬಿ ಪೆವಿಲಿಯನ್ʼ ಭಾರತದ ಎಐ ದೃಷ್ಟಿಕೋನವನ್ನು ಗೋಚರಿಸುವ, ಮಾರುಕಟ್ಟೆ-ಸನ್ನದ್ಧ ಸಾಮರ್ಥ್ಯವನ್ನಾಗಿ ಪರಿವರ್ತಿಸುವ ಉದ್ದೇಶವನ್ನು ಹೊಂದಿದೆ. ಇದು ಜಾಗತಿಕ ಎಐ ಪರಿಸರ ವ್ಯವಸ್ಥೆಯಲ್ಲಿ ದೊಡ್ಡ ಪಾತ್ರವನ್ನು ವಹಿಸುವ ಭಾರತದ ಆಕಾಂಕ್ಷೆಯನ್ನು ಬಲಪಡಿಸುತ್ತದೆ.

ʻಭಾರತ ಎಐ ಪರಿಣಾಮ ಶೃಂಗಸಭೆ-2026 ಅನಾವರಣವಾಗುತ್ತಿದ್ದಂತೆಯೇ, ಭಾರತವು ತನ್ನದೇ ಆದ ನಿಯಮಗಳ ಮೇಲೆ ಕೃತಕ ಬುದ್ಧಿಮತ್ತೆಯನ್ನು ಹೇಗೆ ರೂಪಿಸಲು, ನಿಯಂತ್ರಿಸಲು ಮತ್ತು ಅಳೆಯಲು ಉದ್ದೇಶಿಸಿದೆ ಎಂಬುದಕ್ಕೆ ಈ ʻಪೆವಿಲಿಯನ್ʼ ಕಿಟಕಿಯಾಗಿ ಕಾರ್ಯನಿರ್ವಹಿಸಲಿದೆ.

Source : PIB