ಭಾರತ-ಯುಕೆ ಕಡಲತಡಿಯ ಗಾಳಿ (ಆಫ್‌ಶೋರ್ ವಿಂಡ್) ಕಾರ್ಯಪಡೆ ಆರಂಭ; ಅದನ್ನು ಕಾರ್ಯತಂತ್ರದ ಶುದ್ಧ ಇಂಧನ ಸಹಕಾರ ವೇಗಗೊಳಿಸುವ ‘ವಿಶ್ವಾಸಾರ್ಹ ಪಡೆ’’ ಎಂದು ಬಣ್ಣಿಸಿದ ಶ್ರೀ ಪ್ರಲ್ಹಾದ್ ಜೋಶಿ

0
2

ಭಾರತದ ಮುಂದಿನ ಹಂತದ ಇಂಧನ ಪರಿವರ್ತನೆಯ ಸಂಭಾವ್ಯ ಕಾರ್ಯತಂತ್ರದ ಆಧಾರಸ್ತಂಭವಾಗಿ ಆಫ್‌ಶೋರ್ ವಿಂಡ್ ಅನ್ನು ಪ್ರಮುಖವಾಗಿ ಪ್ರಸ್ತಾಪಿಸಿದ ಶ್ರೀ ಪ್ರಲ್ಹಾದ್ ಜೋಶಿ

ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವರಾದ ಶ್ರೀ ಪ್ರಲ್ಹಾದ್ ಜೋಶಿ ಅವರಿಂದು ಯುನೈಟೆಡ್ ಕಿಂಗ್‌ಡಮ್‌ನ ಗೌರವಾನ್ವಿತ ಉಪ ಪ್ರಧಾನಮಂತ್ರಿ ಶ್ರೀ ಡೇವಿಡ್ ಲ್ಯಾಮಿ ಮತ್ತು ಭಾರತದಲ್ಲಿನ ಬ್ರಿಟಿಷ್ ಹೈಕಮಿಷನರ್ ಶ್ರೀಮತಿ ಲಿಂಡಿ ಕ್ಯಾಮರೂನ್ ಅವರ ಸಮಕ್ಷಮದಲ್ಲಿ ಭಾರತ-ಯುಕೆ ಕಡಲತಡಿಯ ಗಾಳಿ (ಆಫ್‌ಶೋರ್ ವಿಂಡ್) ಕಾರ್ಯಪಡೆ  ಉದ್ಘಾಟನೆಯನ್ನು ಉದ್ದೇಶಿಸಿ ಮಾತನಾಡಿದರು.  

ಕಾರ್ಯಪಡೆಯನ್ನು “ವಿಶ್ವಾಸಾರ್ಹ ಪಡೆ’’ (ಟ್ರಸ್ಟ್‌ಫೋರ್ಸ್) ಎಂದು ಬಣ್ಣಿಸಿರುವ ಶ್ರೀ ಪ್ರಲ್ಹಾದ್ ಜೋಶಿ, ಇದು ಭಾರತ ಮತ್ತು ಯುನೈಟೆಡ್ ಕಿಂಗ್‌ಡಮ್ ನಿಜವಾದ ಅನುಷ್ಠಾನ ಸವಾಲುಗಳನ್ನು ಎದುರಿಸಲು ಒಟ್ಟಾಗಿ ಕಾರ್ಯನಿರ್ವಹಿಸಬಹುದು ಎಂಬ ವಿಶ್ವಾಸವನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದರು. ವೇದಿಕೆಯು ಸಮಯಕ್ಕೆ ಅನುಗುಣವಾಗಿ ಕಾರ್ಯಪ್ರವಾಹಗಳು, ಅಳೆಯಬಹುದಾದ ಮೈಲಿಗಲ್ಲುಗಳು ಮತ್ತು ಪ್ರಗತಿ ಕಾಣುವಂತೆ ಮಾಡುತ್ತದೆ, ಜಾಗತಿಕ ಪಾಠಗಳನ್ನು ಭಾರತೀಯ ಪರಿಸ್ಥಿತಿಗಳಿಗೆ ಅನುಗುಣವಾಗಿ ಪರಿಹಾರಗಳಾಗಿ ಪರಿವರ್ತಿಸುತ್ತದೆ ಎಂದು ಅವರು ಕರೆ ನೀಡಿದರು.

ಭಾರತ-ಯುಕೆ ಆಫ್‌ಶೋರ್ ವಿಂಡ್ ಟಾಸ್ಕ್‌ಫೋರ್ಸ್ ಅನ್ನು ಸಾಂಕೇತಿಕ ವೇದಿಕೆಗಿಂತ ಹೆಚ್ಚಾಗಿ ಕಾರ್ಯನಿರತ ಕಾರ್ಯವಿಧಾನ ಎಂದು ವಿವರಿಸಿದ ಸಚಿವರು, ಭಾರತದ ಆಫ್‌ಶೋರ್ ವಿಂಡ್ ಪರಿಸರ ವ್ಯವಸ್ಥೆಗೆ ಕಾರ್ಯತಂತ್ರದ ನಾಯಕತ್ವ ಮತ್ತು ಸಮನ್ವಯವನ್ನು ಒದಗಿಸಲು ವಿಷನ್ 2035 ಮತ್ತು ನಾಲ್ಕನೇ ಇಂಧನ ಸಂವಾದದಡಿಯಲ್ಲಿ ಇದನ್ನು ರಚಿಸಲಾಗಿದೆ ಎಂದು ಹೇಳಿದರು. ಯುನೈಟೆಡ್ ಕಿಂಗ್‌ಡಮ್ ಆಫ್‌ಶೋರ್ ವಿಂಡ್ ಅನ್ನು ಅಳೆಯುವಲ್ಲಿ ಮತ್ತು ಪ್ರಬುದ್ಧ ಪೂರೈಕೆ ಸರಣಿಗಳನ್ನು ಅಭಿವೃದ್ಧಿಪಡಿಸುವಲ್ಲಿ ಜಾಗತಿಕ ನಾಯಕತ್ವವನ್ನು ಪ್ರದರ್ಶಿಸಿದೆ, ಆದರೆ ಭಾರತವು ಅದರ ಪ್ರಮಾಣ ಹೆಚ್ಚಿಸಿ, ದೀರ್ಘಕಾಲೀನ ಬೇಡಿಕೆ ಮತ್ತು ವೇಗವಾಗಿ ವಿಸ್ತರಿಸುತ್ತಿರುವ ಶುದ್ಧ ಇಂಧನ ಪೂರಕ ವ್ಯವಸ್ಥೆಯನ್ನು ರೂಪಿಸುತ್ತದೆ ಎಂದು ಅವರು ಉಲ್ಲೇಖಿಸಿದರು.

ಅವರು ಉಭಯ ದೇಶಗಳ ಸಹಕಾರಕ್ಕಾಗಿ ಮೂರು ಪ್ರಾಯೋಗಿಕ ಸ್ತಂಭಗಳನ್ನು ವಿವರಿಸಿದರು: ಸಂಸ್ಕರಿಸಿದ ಸಮುದ್ರತಳದ ಗುತ್ತಿಗೆ ಚೌಕಟ್ಟುಗಳು ಮತ್ತು ವಿಶ್ವಾಸಾರ್ಹ ಆದಾಯ-ಖಚಿತತೆಯ ಕಾರ್ಯವಿಧಾನಗಳು ಸೇರಿದಂತೆ ಪೂರಕ ವ್ಯವಸ್ಥೆಯ ಯೋಜನೆ ಮತ್ತು ಮಾರುಕಟ್ಟೆ ವಿನ್ಯಾಸ; ಬಂದರುಗಳ ಆಧುನೀಕರಣ, ಸ್ಥಳೀಯ ಉತ್ಪಾದನೆ ಮತ್ತು ವಿಶೇಷ ಹಡಗುಗಳು ಸೇರಿದಂತೆ ಮೂಲಸೌಕರ್ಯ ಮತ್ತು ಪೂರೈಕೆ ಸರಣಿಳಿಗಳು; ಮತ್ತು ಸಂಯೋಜಿತ ಹಣಕಾಸು ವ್ಯುವಸ್ಥೆಗಳು ಮತ್ತು ದೀರ್ಘಕಾಲೀನ ಸಾಂಸ್ಥಿಕ ಬಂಡವಾಳದ ಸಜ್ಜುಗೊಳಿಸುವಿಕೆಯ ಮೂಲಕ ಹಣಕಾಸು ಮತ್ತು ಅಪಾಯ ತಗ್ಗಿಸುವಿಕೆ ಒಳಗೊಂಡಿವೆ ಎಂದರು.

ಭಾರತದ ಪರಿವರ್ತನೆಯ ಮುಂದಿನ ಹಂತವು ವಿಶ್ವಾಸಾರ್ಹತೆ, ಗ್ರಿಡ್ ಸ್ಥಿರತೆ, ಆಳವಾದ ಕೈಗಾರಿಕೆ ಮತ್ತು ಇಂಧನ ಸುರಕ್ಷತೆಯನ್ನು ಬಲಪಡಿಸಬೇಕು ಮತ್ತು ಈ ಪಯಣದಲ್ಲಿ ಕಡಲತಡಿಯ ಗಾಳಿಯು ಕಾರ್ಯತಂತ್ರದ ಪಾತ್ರವನ್ನು ಹೊಂದಿದೆ ಎಂದು ಸಚಿವರು ಬಲವಾಗಿ ಪ್ರತಿಪಾದಿಸಿದರು. ಗುಜರಾತ್ ಮತ್ತು ತಮಿಳುನಾಡಿನ ಕರಾವಳಿಯಲ್ಲಿ ಭರವಸೆಯ ಕಡಲತಡಿಯ ಪವನ ವಲಯಗಳನ್ನು ಗುರುತಿಸಲಾಗಿದ್ದು, ಗ್ರಿಡ್ ಯೋಜನೆಯೊಂದಿಗೆ ಆರಂಭಿಕ ಯೋಜನೆಗಳಿಗಾಗಿ ರಾಷ್ಟ್ರೀಯ ಪವನ ಇಂಧನ ಸಂಸ್ಥೆಯ ಮೂಲಕ ಅಗತ್ಯ ಅಧ್ಯಯನಗಳು ಮತ್ತು ಸಮೀಕ್ಷೆಗಳನ್ನು ನಡೆಸಲಾಗಿದೆ ಎಂದು ಹೇಳಿದರು.

ಆರಂಭದಲ್ಲಿ ಯೋಜನೆಗಳನ್ನು ಬೆಂಬಲಿಸಲು, ಸರ್ಕಾರವು 7,453 ಕೋಟಿ ರೂಪಾಯಿಗಳ ಒಟ್ಟು ವೆಚ್ಚದೊಂದಿಗೆ ಅಂದರೆ ಸುಮಾರು £710 ಮಿಲಿಯನ್  ವೆಚ್ಚದಲ್ಲಿ ಕಾರ್ಯಸಾಧ್ಯತಾ ಅಂತರ ನಿಧಿ ಯೋಜನೆಯನ್ನು ಪರಿಚಯಿಸಿದೆ. ಕಡಲತಡಿಯ ಗಾಳಿಯು ಜಾಗತಿಕ ಇಂಧನ ಪರಿವರ್ತನೆಯ ಅತ್ಯಂತ ಸಂಕೀರ್ಣ ವಿಭಾಗಗಳಲ್ಲಿ ಒಂದಾಗಿದೆ ಎಂದು ಶ್ರೀ ಪ್ರಲ್ಹಾದ್ ಜೋಶಿ ಉಲ್ಲೇಖಿಸಿದರು, ಅದಕ್ಕೆ ವಿಶೇಷ ಬಂದರು ಮೂಲಸೌಕರ್ಯ, ಸಾಗರ ಲಾಜಿಸ್ಟಿಕ್ಸ್, ಬಲವಾದ ಸಮುದ್ರತಳದ ಗುತ್ತಿಗೆ ಚೌಕಟ್ಟುಗಳು, ಸ್ಪಷ್ಟ ಅಪಾಯ ಹಂಚಿಕೆ ಮತ್ತು ವಿಶ್ವಾಸಾರ್ಹ ವಾಣಿಜ್ಯ ಕಟ್ಟಡಗಳು ಬೇಕಾಗುತ್ತವೆ ಎಂದು ಹೇಳಿದರು.

ಕಡಲತಡಿಯ ಗಾಳಿ(ಆಫ್ ಶೋರ್) ಮತ್ತು ಭಾರತದ ಹಸಿರು ಹೈಡ್ರೋಜನ್ ಮಹತ್ವಾಕಾಂಕ್ಷೆಗಳ ನಡುವಿನ ಸಮನ್ವಯವನ್ನು ಶ್ರೀ ಜೋಶಿ ಅವರು ಪ್ರಮುಖವಾಗಿ ಮತ್ತಷ್ಟು ವಿವರಿಸಿದರು. ಅಂತಾರಾಷ್ಟ್ರೀಯ ಬ್ರೇಕ್‌ಥ್ರೂ ಕಾರ್ಯಸೂಚಿಯ ಅಡಿಯಲ್ಲಿ ಭಾರತ ಹೈಡ್ರೋಜನ್ ಬ್ರೇಕ್‌ಥ್ರೂ ಗುರಿಯನ್ನು ಮುನ್ನಡೆಸುತ್ತಿದೆ ಮತ್ತು ರಾಷ್ಟ್ರೀಯ ಹಸಿರು ಹೈಡ್ರೋಜನ್ ಮಿಷನ್ ಅಡಿಯಲ್ಲಿ ಜಾಗತಿಕವಾಗಿ ಸ್ಪರ್ಧಾತ್ಮಕ ಮಾನದಂಡಗಳನ್ನು ಸಾಧಿಸಿದೆ ಎಂದು ಅವರು ಉಲ್ಲೇಖಿಸಿದರು, ಹಸಿರು ಹೈಡ್ರೋಜನ್ ಬೆಲೆಗಳು ಪ್ರತಿ ಕೆಜಿಗೆ 279 ರೂ.(ಪ್ರತಿ ಕೆಜಿಗೆ ಸರಿಸುಮಾರು £2.65) ಗಳ ಐತಿಹಾಸಿಕ ಕನಿಷ್ಠ ಮಟ್ಟಕ್ಕೆ ಇಳಿದಿವೆ ಮತ್ತು ಹಸಿರು ಅಮೋನಿಯಾ ಬೆಲೆಗಳು ಪ್ರತಿ ಕೆಜಿಗೆ 49.75 ರೂ.(ಪ್ರತಿ ಕೆಜಿಗೆ ಸರಿಸುಮಾರು £0.47) ತಲುಪಿವೆ.

ಕಡಲತಡಿಯ ಗಾಳಿಯು ಉದಯೋನ್ಮುಖ ಕರಾವಳಿ ಕೈಗಾರಿಕಾ ಮತ್ತು ಹಸಿರು ಹೈಡ್ರೋಜನ್ ಕ್ಲಸ್ಟರ್‌ಗಳಿಗೆ ಉತ್ತಮ ಗುಣಮಟ್ಟದ ನವೀಕರಿಸಬಹುದಾದ ಇಂಧನವನ್ನು ಒದಗಿಸಬಹುದು, ಇಂಧನ ಭದ್ರತೆ ಮತ್ತು ಕೈಗಾರಿಕಾ ಸ್ಪರ್ಧಾತ್ಮಕತೆಯನ್ನು ಬಲಪಡಿಸುತ್ತದೆ ಎಂದು ಅವರು ಹೇಳಿದರು.

ಭಾರತದ ಶುದ್ಧ ಇಂಧನ ಪರಿವರ್ತನೆಯನ್ನು ದೊಡ್ಡ ಪ್ರಮಾಣದಲ್ಲಿ ಕಾರ್ಯಗತಗೊಳಿಸುವ ಮೂಲಕ ವ್ಯಾಖ್ಯಾನಿಸಲಾಗಿದೆ ಎಂದು ಶ್ರೀ ಜೋಶಿ ಒತ್ತಿ ಹೇಳಿದರು. ಭಾರತದ ಸ್ಥಾಪಿತ ಪಳೆಯುಳಿಕೆಯೇತರ ಇಂಧನ ಸಾಮರ್ಥ್ಯವು 272 ಗಿಗಾವ್ಯಾಟ್  ಅನ್ನು ದಾಟಿದೆ ಎಂದು ಅವರು ಮಾಹಿತಿ ನೀಡಿದರು. ಅದರಲ್ಲಿ 141 ಗಿಗಾವ್ಯಾಟ್ ಗಿಂತ ಹೆಚ್ಚು ಸೌರ ಮತ್ತು 55 ಗಿಗಾವ್ಯಾಟ್ ಗಿಂತ ಹೆಚ್ಚು ಪವನ ಸಾಮರ್ಥ್ಯ ಸೇರಿವೆ. ಪ್ರಸ್ತುತ ಹಣಕಾಸು ವರ್ಷದಲ್ಲಿ ಭಾರತವು 35 ಗಿಗಾವ್ಯಾಟ್ ಗಿಂತ ಹೆಚ್ಚು ಸೌರ ಮತ್ತು 4.61 ಗಿಗಾವ್ಯಾಟ್ ಗಿಂತ ಹೆಚ್ಚು ಪವನ ಸಾಮರ್ಥ್ಯವನ್ನು ಸೇರ್ಪಡೆ ಮಾಡಲಾಗಿದೆ.

ಉದ್ದೇಶದ ಸ್ಪಷ್ಟತೆ ಮತ್ತು ಹಂಚಿಕೆಯ ಬದ್ಧತೆಯೊಂದಿಗೆ ಕಡಲತಡಿಯ ಪವನವು ಭಾರತದ ಶುದ್ಧ, ವಿಶ್ವಾಸಾರ್ಹ ಮತ್ತು ಸ್ವಾವಲಂಬಿ ಇಂಧನ ಭವಿಷ್ಯದ ಬಲವಾದ ಸ್ತಂಭವಾಗಿ ಹೊರಹೊಮ್ಮಬಹುದು ಮತ್ತು ವಿಷನ್ 2035ರಡಿಯಲ್ಲಿ ಭಾರತ-ಯುಕೆ ಸಹಕಾರದ ಪ್ರಮುಖ ಅಂಶವಾಗಿ ಹೊರಹೊಮ್ಮಬಹುದು ಎಂದು ಅವರು ತಮ್ಮ ಮಾತುಗಳನ್ನು ಸಮಾಪನಗೊಳಿಸಿದರು.

Source : PIB