ನಾಗರಿಕರ ಸಹಭಾಗಿತ್ವದ ಮೂಲಕ ಕರಾವಳಿ ಭದ್ರತೆಯ ಬಲವರ್ಧನೆ
ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿ ಐ ಎಸ್ ಎಫ್) ವಂದೇ ಮಾತರಂ ಕರಾವಳಿ ಸೈಕ್ಲೋಥಾನ್–2026 ಇಂದು ಮಂಗಳೂರನ್ನು ತಲುಪಿ, ಸೈಕಲ್ ಸವಾರರಿಗೆ ಆತ್ಮೀಯ ಮತ್ತು ಉತ್ಸಾಹಭರಿತ ಸ್ವಾಗತ ದೊರೆಯಿತು. ಈ ಪಯಣವು ಭಾರತದ ಕರಾವಳಿಯುದ್ದಕ್ಕೂ 6,553 ಕಿಮೀ ಪ್ರಯಾಣದಲ್ಲಿ ಒಂದು ಪ್ರಮುಖ ಮೈಲಿಗಲ್ಲಾಗಿದೆ. ಶೇ 50 ರಷ್ಟು ಮಹಿಳೆಯರು ಸೇರಿದಂತೆ 130 ಸೈಕಲ್ ಸವಾರರನ್ನು ಒಳಗೊಂಡ ಈ ಸೈಕ್ಲೋಥಾನ್ ಅನ್ನು ಜನವರಿ 28, 2026 ರಂದು ನವದೆಹಲಿಯ ಮೇಜರ್ ಧ್ಯಾನ್ ಚಂದ್ ನ್ಯಾಷನಲ್ ಸ್ಟೇಡಿಯಂನಿಂದ ಕೇಂದ್ರ ಗೃಹ ವ್ಯವಹಾರಗಳ ರಾಜ್ಯಖಾತೆ ಸಚಿವರು ಉದ್ಘಾಟಿಸಿದರು. ಇದನ್ನು “ಸುರಕ್ಷಿತ ತಟ, ಸಮೃದ್ಧ್ ಭಾರತ” (ಸುರಕ್ಷಿತ ಕರಾವಳಿ, ಸಮೃದ್ಧ ಭಾರತ) ಎಂಬ ಪರಿಕಲ್ಪನೆಯಡಿ ನಡೆಸಲಾಗುತ್ತಿದೆ ಮತ್ತು ಏಕತೆ ಹಾಗೂ ಸಾಮೂಹಿಕ ರಾಷ್ಟ್ರೀಯ ಸಂಕಲ್ಪದ ಸಂಕೇತವಾಗಿ ವಂದೇ ಮಾತರಂನ ದೇಶಭಕ್ತಿಯ ಮನೋಭಾವವನ್ನು ಇದು ಮುಂದಕ್ಕೆ ಕೊಂಡೊಯ್ಯುತ್ತದೆ.
ಭಾರತದ 7,500 ಕಿಮೀ ಕರಾವಳಿಯು 250ಕ್ಕೂ ಹೆಚ್ಚು ಬಂದರುಗಳನ್ನು ಬೆಂಬಲಿಸುತ್ತದೆ, ಇದರಲ್ಲಿ ದೇಶದ ಒಟ್ಟು ವ್ಯಾಪಾರದ ಸುಮಾರು ಶೇ 95 ರಷ್ಟನ್ನು ನಿಭಾಯಿಸುವ 72 ‘ಎಕ್ಸಿಮ್’ ಬಂದರುಗಳು ಸೇರಿವೆ. ಕರಾವಳಿ ಕರ್ನಾಟಕವನ್ನು ಒಳಗೊಂಡಂತೆ ಪಶ್ಚಿಮ ಸಮುದ್ರ ತೀರವು ದೇಶದ ನೀಲಿ ಆರ್ಥಿಕತೆ, ಮೀನುಗಾರಿಕೆ, ಪೆಟ್ರೋಲಿಯಂ ಲಾಜಿಸ್ಟಿಕ್ಸ್ ಮತ್ತು ಕಡಲ ವಾಣಿಜ್ಯದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಆಯಕಟ್ಟಿನ ಮಹತ್ವದ ನವ ಮಂಗಳೂರು ಬಂದರನ್ನು ಹೊಂದಿರುವ ಮಂಗಳೂರು ನಗರವು ಕಚ್ಚಾ ತೈಲ ಆಮದು, ರಸಗೊಬ್ಬರಗಳು, ಖಾದ್ಯ ತೈಲಗಳು ಮತ್ತು ರಫ್ತು ಸರಕುಗಳಿಗೆ ಪ್ರಮುಖ ದ್ವಾರವಾಗಿ ನಿಂತಿದೆ. ಈ ಹಿನ್ನೆಲೆಯಲ್ಲಿ, ಸೈಕ್ಲೋಥಾನ್ ಕರಾವಳಿ ಸಮುದಾಯಗಳನ್ನು ಮಾದಕ ದ್ರವ್ಯ ಸಾಗಣೆ, ಶಸ್ತ್ರಾಸ್ತ್ರ ಮತ್ತು ಸ್ಫೋಟಕಗಳ ಕಳ್ಳಸಾಗಣೆ ಮತ್ತು ನುಸುಳುವಿಕೆಯಂತಹ ಬೆದರಿಕೆಗಳ ಬಗ್ಗೆ ಸಂವೇದನಾಶೀಲಗೊಳಿಸಲು ಪ್ರಯತ್ನಿಸುತ್ತದೆ. ಜೊತೆಗೆ ರಾಷ್ಟ್ರೀಯ ಕಡಲ ಹಿತಾಸಕ್ತಿಗಳನ್ನು ಕಾಪಾಡುವಲ್ಲಿ ಸಮುದಾಯದ ಜಾಗೃತಿಯ ಪ್ರಾಮುಖ್ಯತೆಯನ್ನು ಬಲಪಡಿಸುತ್ತದೆ. ಐದಕ್ಕೂ ಹೆಚ್ಚು ದಶಕಗಳಿಂದ, ಸಿಐಎಸ್ಎಫ್ ನಿರ್ಣಾಯಕ ಕರಾವಳಿ ಮೂಲಸೌಕರ್ಯಗಳನ್ನು ರಕ್ಷಿಸಿದೆ. ಇತ್ತೀಚೆಗೆ ಸರ್ಕಾರವು ಇದನ್ನು ‘ಐ ಎಸ್ ಆರ್ ಪಿ’ ಕೋಡ್ ಅಡಿಯಲ್ಲಿ ಬಂದರು ಭದ್ರತೆಗಾಗಿ ಅಧಿಕೃತ ಭದ್ರತಾ ಸಂಸ್ಥೆಯಾಗಿ ನೇಮಿಸಿದೆ. ಈ ಕ್ರಮವು ದೇಶಾದ್ಯಂತ ಬಂದರು ಭದ್ರತಾ ಚೌಕಟ್ಟನ್ನು ಬಲಪಡಿಸುವ ನಿರೀಕ್ಷೆಯಿದೆ.
ಮಂಗಳೂರಿಗೆ ಸೈಕ್ಲೋಥಾನ್ ಆಗಮನವು ವಿದ್ಯಾರ್ಥಿಗಳು, ಎನ್ ಸಿ ಸಿ ಕೆಡೆಟ್ಗಳು, ಯುವ ಗುಂಪುಗಳು, ಮೀನುಗಾರರು ಮತ್ತು ಮಹಿಳಾ ಸ್ವಸಹಾಯ ಗುಂಪುಗಳಿಂದ ಸಕ್ರಿಯ ಭಾಗವಹಿಸುವಿಕೆಯನ್ನು ಕಂಡಿತು, ಇದು ಕರಾವಳಿ ಸಮುದಾಯಗಳಲ್ಲಿ ಈ ಉಪಕ್ರಮದ ಉತ್ಸಾಹವನ್ನು ಪ್ರತಿಬಿಂಬಿಸುತ್ತದೆ. ಸಂವಾದಾತ್ಮಕ ಅಧಿವೇಶನಗಳು ಕಡಲ ಜಾಗೃತಿ, ಮಾದಕ ದ್ರವ್ಯ ಸಾಗಣೆ ವಿರುದ್ಧ ಜಾಗೃತಿ ಮತ್ತು ರಾಷ್ಟ್ರೀಯ ಭದ್ರತೆಯಲ್ಲಿ ಪಾಲುದಾರರಾಗಿ ನಾಗರಿಕರ ಪಾತ್ರದ ಮೇಲೆ ಕೇಂದ್ರೀಕರಿಸಿದ್ದವು. ಯುವಜನರ ತೊಡಗಿಸಿಕೊಳ್ಳುವಿಕೆ ಮತ್ತು ಮಹಿಳಾ ಸಬಲೀಕರಣಕ್ಕೆ ವಿಶೇಷ ಒತ್ತು ನೀಡಲಾಯಿತು. ಸಿಐಎಸ್ಎಫ್ ತಂಡದಲ್ಲಿ ಮಹಿಳಾ ಸೈಕ್ಲಿಸ್ಟ್ಗಳ ಉಪಸ್ಥಿತಿಯು ಈ ಪ್ರದೇಶದ ಯುವತಿಯರಿಗೆ ಸ್ಫೂರ್ತಿ ನೀಡಿದೆ, ಅವರಲ್ಲಿ ಅನೇಕರು ತಂಡದ ಜೊತೆಯಲ್ಲಿ ಸೈಕಲ್ ಚಲಾಯಿಸಿದರು ಮತ್ತು ವೃತ್ತಿ ಅವಕಾಶಗಳು, ದೇಹದ ಕ್ಷಮತೆ ಮತ್ತು ರಾಷ್ಟ್ರ ನಿರ್ಮಾಣದ ಕುರಿತಾದ ಚರ್ಚೆಗಳಲ್ಲಿ ಭಾಗವಹಿಸಿದರು. ಸಂವಾದಗಳು ಕರಾವಳಿ ಜಿಲ್ಲೆಗಳಲ್ಲಿ ವಸತಿ, ಶುದ್ಧ ಅಡುಗೆ ಅನಿಲ, ಕುಡಿಯುವ ನೀರು, ಹೆಣ್ಣು ಮಕ್ಕಳ ಶಿಕ್ಷಣ ಮತ್ತು ಜೀವನೋಪಾಯದ ಅವಕಾಶಗಳನ್ನು ಸುಧಾರಿಸುವಲ್ಲಿ ವಿವಿಧ ಸರ್ಕಾರಿ ಉಪಕ್ರಮಗಳ ಪ್ರಭಾವವನ್ನು ವಿವರಿಸಿದವು.
ಈ ಸಂದರ್ಭದಲ್ಲಿ ಮಾತನಾಡಿದ ಸಿಐಎಸ್ಎಫ್ನ ಹೆಚ್ಚುವರಿ ಮಹಾನಿರ್ದೇಶಕರಾದ (ಪ್ರಧಾನ ಕಚೇರಿ) ಶ್ರೀ ವಿಜಯ್ ಪ್ರಕಾಶ್ ಅವರು, “ಕರಾವಳಿ ಸೈಕ್ಲೋಥಾನ್ ಕೇವಲ ಸಾಂಕೇತಿಕ ಪ್ರಯಾಣವಲ್ಲ; ಇದು ನಾವು ಸೇವೆ ಸಲ್ಲಿಸುವ ಜನರೊಂದಿಗೆ ಪಡೆಯನ್ನು ಸಂಪರ್ಕಿಸುವ ಒಂದು ವ್ಯವಸ್ಥಿತ ಪ್ರಯತ್ನವಾಗಿದೆ. ಕರಾವಳಿ ಭದ್ರತೆಯನ್ನು ಕೇವಲ ಭದ್ರತಾ ಏಜೆನ್ಸಿಗಳಿಂದ ಮಾತ್ರ ಖಚಿತಪಡಿಸಿಕೊಳ್ಳಲು ಸಾಧ್ಯವಿಲ್ಲ – ಇದಕ್ಕೆ ಜಾಗೃತಿ, ಪಾಲುದಾರಿಕೆ ಮತ್ತು ವಿಶ್ವಾಸದ ಅಗತ್ಯವಿದೆ. ಮಂಗಳೂರಿನಲ್ಲಿ ಜನರು ವಿಶೇಷವಾಗಿ ಯುವಜನರಿಂದ ವ್ಯಕ್ತವಾದ ಅಭೂತಪೂರ್ವ ಪ್ರತಿಕ್ರಿಯೆಯು, ನಾಗರಿಕರು ಸಮೃದ್ಧ ಮತ್ತು ಸುರಕ್ಷಿತ ಭಾರತಕ್ಕೆ ಕೊಡುಗೆ ನೀಡುವ ಜೊತೆಗೆ ನಮ್ಮ ಕಡಲ ಗಡಿಗಳನ್ನು ಕಾಪಾಡುವಲ್ಲಿ ಸಕ್ರಿಯವಾಗಿ ಭಾಗವಹಿಸಲು ಸಿದ್ಧರಾಗಿದ್ದಾರೆ ಎಂಬುದನ್ನು ಪುನರುಚ್ಚರಿಸುತ್ತದೆ” ಎಂದು ತಿಳಿಸಿದರು.
ತನ್ನ ಸುಸ್ಥಿರ ತಲುಪುವಿಕೆಯ ಮಾದರಿಯ ಭಾಗವಾಗಿ, ಸಿಐಎಸ್ಎಫ್ ಸೈಕ್ಲಿಸ್ಟ್ಗಳು ಯಾತ್ರೆಯ ಸಮಯದಲ್ಲಿ 50 ಕ್ಕೂ ಹೆಚ್ಚು ಆಯ್ದ ಕರಾವಳಿ ಗ್ರಾಮಗಳಲ್ಲಿ ತಂಗುತ್ತಿದ್ದು, ಸ್ಥಳೀಯ ಸಮುದಾಯಗಳೊಂದಿಗೆ ಒಗ್ಗಟ್ಟನ್ನು ವ್ಯಕ್ತಪಡಿಸುತ್ತಿದ್ದಾರೆ ಮತ್ತು ದೇಹದ ಕ್ಷಮತೆ, ನೇಮಕಾತಿ ಅವಕಾಶಗಳು, ಸ್ವಚ್ಛತೆ ಮತ್ತು ಪರಿಸರ ಸಂರಕ್ಷಣೆಯ ಕುರಿತು ಜಾಗೃತಿ ಅಭಿಯಾನಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಸಿಐಎಸ್ಎಫ್ನ 47 ಕರಾವಳಿ ಘಟಕಗಳು ಈ ಸಮುದಾಯಗಳೊಂದಿಗೆ ದೀರ್ಘಕಾಲೀನ ತೊಡಗಿಸಿಕೊಳ್ಳುವಿಕೆಯನ್ನು ಮುಂದುವರಿಸುತ್ತವೆ ಮತ್ತು ಆಯ್ದ ಪ್ರದೇಶಗಳಲ್ಲಿ, ಮೂಲಸೌಕರ್ಯ ಮತ್ತು ಅಗತ್ಯ ಸೇವೆಗಳನ್ನು ಬಲಪಡಿಸಲು ಸಿಎಸ್ಆರ್ ಬೆಂಬಲದ ಮೂಲಕ ಪಾಲುದಾರರ ಸಹಯೋಗದೊಂದಿಗೆ ಕಲ್ಯಾಣ ಉಪಕ್ರಮಗಳನ್ನು ಯೋಜಿಸಲಾಗಿದೆ. ಸಮುದ್ರತೀರದ ಸ್ವಚ್ಛತಾ ಅಭಿಯಾನಗಳು, ಸಸಿ ನೆಡುವ ಕಾರ್ಯಕ್ರಮಗಳು ಮತ್ತು ಸಮುದಾಯ ಸಂವಾದಗಳ ಮೂಲಕ, ಆರ್ಥಿಕ ಬೆಳವಣಿಗೆ ಮತ್ತು ಸುಸ್ಥಿರ ಅಭಿವೃದ್ಧಿಗೆ ಸುರಕ್ಷಿತ ಮತ್ತು ಸ್ವಚ್ಛ ಕರಾವಳಿ ಅತ್ಯಗತ್ಯ ಎಂಬ ಸಂದೇಶವನ್ನು ಸೈಕ್ಲೋಥಾನ್ ಸಾರುತ್ತಿದೆ.
ಸೈಕ್ಲೋಥಾನ್ ಭಾರತದ ಪೂರ್ವ ಮತ್ತು ಪಶ್ಚಿಮ ಕರಾವಳಿಗಳೆರಡರ ವ್ಯಾಪಕ ಭಾಗಗಳನ್ನು ಕ್ರಮಿಸಿದೆ. ಪೂರ್ವ ಭಾಗದಲ್ಲಿ ಪಶ್ಚಿಮ ಬಂಗಾಳ, ಒಡಿಶಾ ಮತ್ತು ಆಂಧ್ರಪ್ರದೇಶಗಳನ್ನು ದಾಟಿದ ನಂತರ ಯಾತ್ರೆಯು ತಮಿಳುನಾಡಿನ ತೂತುಕುಡಿಯನ್ನು ತಲುಪಿದೆ. ಪಶ್ಚಿಮ ಕರಾವಳಿಯುದ್ದಕ್ಕೂ ಗುಜರಾತ್, ಮಹಾರಾಷ್ಟ್ರ, ಗೋವಾ ಮತ್ತು ಕರ್ನಾಟಕವನ್ನು ಕ್ರಮಿಸಿದ ನಂತರ ಅದು ಈಗ ಮಂಗಳೂರನ್ನು ತಲುಪಿದೆ, ಇದು ಭದ್ರತಾ ಪಡೆಗಳು ಮತ್ತು ನಾಗರಿಕರ ನಡುವಿನ ಸಹಯೋಗವನ್ನು ಬಲಪಡಿಸುವ ಜನಕೇಂದ್ರಿತ ಚಳವಳಿಯಾಗಿ ಸ್ಥಿರವಾಗಿ ವಿಕಸನಗೊಳ್ಳುತ್ತಿದೆ. ಫೆಬ್ರವರಿ 22, 2026 ರಂದು ಕೊಚ್ಚಿಯಲ್ಲಿ ತನ್ನ ಸಮಾರೋಪದತ್ತ ದಕ್ಷಿಣಕ್ಕೆ ಸಾಗುತ್ತಿರುವ ಈ ಉಪಕ್ರಮವು ಸಿಐಎಸ್ಎಫ್ನ ಪೂರ್ವಭಾವಿ, ನಾಗರಿಕ-ಸ್ನೇಹಿ ವಿಧಾನವನ್ನು ಪ್ರದರ್ಶಿಸುವುದನ್ನು ಮುಂದುವರಿಸಿದೆ – ಜಾಗೃತಿಯನ್ನು ಉತ್ತೇಜಿಸುವುದು, ಯುವಜನರನ್ನು ಪ್ರೇರೇಪಿಸುವುದು, ಮಹಿಳೆಯರನ್ನು ಸಬಲೀಕರಣಗೊಳಿಸುವುದು ಮತ್ತು ಕರಾವಳಿ ಸಮುದಾಯಗಳು ಹಾಗೂ ರಾಷ್ಟ್ರೀಯ ಭದ್ರತಾ ಸಂಸ್ಥೆಗಳ ನಡುವಿನ ಬಾಂಧವ್ಯವನ್ನು ಬಲಪಡಿಸುತ್ತಿದೆ. ಅವರ್ಸಾ ಮತ್ತು ದಿವಗಿ/ಕುಮಟಾದಿಂದ ಕುಲೈವರೆಗೆ ಕರ್ನಾಟಕದಾದ್ಯಂತ ಕರಾವಳಿ ಸಮುದಾಯಗಳೊಂದಿಗಿನ ಅದರ ತೊಡಗಿಸಿಕೊಳ್ಳುವಿಕೆಯ ನಂತರ ಮಂಗಳೂರಿನಲ್ಲಿ ಸಿಕ್ಕ ಸ್ವಾಗತವು, ಸುರಕ್ಷಿತ ಕರಾವಳಿಯೇ ಸಮೃದ್ಧ ಭಾರತದ ಅಡಿಪಾಯ ಎಂಬ ನಂಬಿಕೆಗೆ ಸಾಕ್ಷಿಯಾಗಿದೆ.
Source : PIB

