ಭಾರತೀಯ ಅಂಚೆ ಇಲಾಖೆಯ ವತಿಯಿಂದ ಮೈಸೂರಿನಲ್ಲಿ ಆಯೋಜಿಸಲಾಗಿದ್ದ ’38ನೇ ಅಖಿಲ ಭಾರತ ಅಂಚೆ ಸಾಂಸ್ಕೃತಿಕ ಸಮಾರಂಭ–2026′ ಇಂದು ಸಾಂಸ್ಕೃತಿಕ ನಗರಿಯ ಅಂಚೆ ತರಬೇತಿ ಕೇಂದ್ರದಲ್ಲಿ ಭವ್ಯ ಯಶಸ್ಸಿನೊಂದಿಗೆ ತೆರೆಕಂಡಿತು. ಫೆಬ್ರವರಿ 16ರಿಂದ 20ರವರೆಗೆ ನಡೆದ ಈ ರಾಷ್ಟ್ರೀಯ ಮಟ್ಟದ ಪ್ರತಿಷ್ಠಿತ ಸಮ್ಮೇಳನದಲ್ಲಿ ದೇಶದ 21 ಅಂಚೆ ವಲಯಗಳ 293 ಸ್ಪರ್ಧಿಗಳು ಭಾಗವಹಿಸಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು.
ಸಮಾರೋಪ ಸಮಾರಂಭದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಪದ್ಮಶ್ರೀ ಪುರಸ್ಕೃತ ಖ್ಯಾತ ಹಿಂದುಸ್ತಾನಿ ಶಾಸ್ತ್ರೀಯ ಗಾಯಕ ಶ್ರೀ ಪಂಡಿತ್ ವೆಂಕಟೇಶ್ ಕುಮಾರ್ ಅವರು ಮಾತನಾಡಿ, “ಪ್ರತಿಯೊಬ್ಬರ ಜೀವನದಲ್ಲೂ ವೃತ್ತಿಯ ಜೊತೆಗೆ ಪ್ರವೃತ್ತಿಯೂ ಬಹಳ ಮುಖ್ಯ. ಅಂಚೆ ಇಲಾಖೆಯು ಪ್ರಾಮಾಣಿಕತೆಗೆ ಹೆಸರಾದ ಇಲಾಖೆಯಾಗಿದ್ದು, ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಇಂತಹ ಕಾರ್ಯಕ್ರಮ ಹಮ್ಮಿಕೊಂಡಿರುವುದು ಅತ್ಯಂತ ಅರ್ಥಗರ್ಭಿತವಾಗಿದೆ,” ಎಂದು ಶ್ಲಾಘಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಅಂಚೆ ವೃತ್ತದ ಪೋಸ್ಟ್ ಮಾಸ್ಟರ್ ಜನರಲ್ ಶ್ರೀ ಕೆ. ಪ್ರಕಾಶ್ ಅವರು ಮಾತನಾಡಿ, “ಇಂದಿನ ಡಿಜಿಟಲೀಕರಣದ ಯುಗದಲ್ಲಿ ಕೆಲಸದ ಒತ್ತಡಕ್ಕೊಳಗಾದಾಗ ಸಂಗೀತ ಮತ್ತು ಕಲೆಗಳು ಮನಸ್ಸಿಗೆ ನೆಮ್ಮದಿಯನ್ನು ನೀಡುತ್ತವೆ,” ಎಂದರು.
ಸ್ಪರ್ಧೆಯ ಫಲಿತಾಂಶ:
ಕೇರಳ ಅಂಚೆ ವಲಯ (108 ಅಂಕಗಳು – 17 ಪ್ರಥಮ ಸೇರಿದಂತೆ ಒಟ್ಟು 22 ಬಹುಮಾನಗಳು) ಚಾಂಪಿಯನ್ ಶಿಪ್, ಕರ್ನಾಟಕ ಅಂಚೆ ವಲಯ (105 ಅಂಕಗಳು – 16 ಪ್ರಥಮ ಸೇರಿದಂತೆ ಒಟ್ಟು 34 ಬಹುಮಾನಗಳು) ರನ್ನರ್-ಅಪ್ ಹಾಗೂ ಒಡಿಶಾ ಅಂಚೆ ವಲಯ (38 ಅಂಕಗಳು – ಒಟ್ಟು 11 ಬಹುಮಾನಗಳು) ತೃತೀಯ ಸ್ಥಾನ ಪಡೆದುಕೊಂಡಿದೆ
ಈ ಐದು ದಿನಗಳ ಸಮಾವೇಶವು ಶಾಸ್ತ್ರೀಯ ಸಂಗೀತ, ನೃತ್ಯ, ಜನಪದ ಪರಂಪರೆ ಮತ್ತು ಆಧುನಿಕ ಕಲಾ ಪ್ರಕಾರಗಳ ಮೂಲಕ ಭಾರತದ ಸಮೃದ್ಧ ಸಂಸ್ಕೃತಿಯನ್ನು ಪ್ರತಿಬಿಂಬಿಸಿತು. ಅಂಚೆ ನೌಕರರು ಮತ್ತು ಅವರ ಮಕ್ಕಳಲ್ಲಿ ಏಕತೆ ಹಾಗೂ ತಂಡ-ಭಾವನೆಯನ್ನು ಬೆಳೆಸುವಲ್ಲಿ ಈ ವೇದಿಕೆ ಯಶಸ್ವಿಯಾಯಿತು.
ಅತ್ಯುತ್ತಮ ವೈಯಕ್ತಿಕ ಪ್ರದರ್ಶನ:-
ಹಲವಾರು ಸ್ಪರ್ಧಿಗಳು ವಿವಿಧ ವಿಭಾಗಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದರು. ಪ್ರಮುಖ ವಿಜೇತರು ಹೀಗಿದ್ದಾರೆ:
| ಕ್ರಮ ಸಂಖ್ಯೆ | ಭಾಗವಹಿಸಿದವರ ಹೆಸರು | ಒಟ್ಟು ಪ್ರಶಸ್ತಿಗಳು | ಒಟ್ಟು ಕಾರ್ಯಕ್ರಮಗಳು | ಅಂಚೆ ವಲಯದ ಹೆಸರು |
| 1 | ಚಾರ್ಮಿ ಎಸ್ | 4 | 4 | ಕರ್ನಾಟಕ |
| 2 | ಅಭಿಮನ್ಯು | 3 | 3 | ಕರ್ನಾಟಕ |
| 3 | ಪ್ರಥಮ್ ಕೆ ಆರ್ | 3 | 3 | ಕರ್ನಾಟಕ |
| 4 | ಪುಣ್ಯಶ್ರೀ ಡಿ ಎಂ | 3 | 3 | ಕರ್ನಾಟಕ |
| 5 | ಶಂಭವಿ ದೆಗಾವಿಮಠ | 3 | 3 | ಕರ್ನಾಟಕ |
| 6 | ಸೃಷ್ಟಿ ಜಿ ಎಸ್ | 3 | 3 | ಕರ್ನಾಟಕ |
| 7 | ದುರ್ಗಾ ರಾಮ್ ಎಸ್ | 3 | 3 | ಕೇರಳ |
| 8 | ಶ್ರೀಹರಿ ವಿ ಆರ್ | 3 | 3 | ಕೇರಳ |
| 9 | ತೀರ್ಥ ಪ್ರಕಾಶ್ | 3 | 3 | ಕೇರಳ |
38ನೇ AIPCM–2026 ಸಾಂಸ್ಕೃತಿಕ ವಿನಿಮಯಕ್ಕೆ ಚೈತನ್ಯಮಯ ವೇದಿಕೆಯಾಗಿದ್ದು, ಅಂಚೆ ನೌಕರರ ಮಧ್ಯೆ ಏಕತೆ, ತಂಡ-ಭಾವನೆಯನ್ನು ಹಾಗೂ ರಾಷ್ಟ್ರೀಯ ಏಕೀಕರಣವನ್ನು ಉತ್ತೇಜಿಸಿತು. ಈ ಸಮಾವೇಶವು ಶಾಸ್ತ್ರೀಯ ಸಂಗೀತ, ನೃತ್ಯ, ವಾದ್ಯವೃಂದ ಪ್ರದರ್ಶನಗಳು, ಜನಪದ ಪರಂಪರೆಗಳು ಹಾಗೂ ಆಧುನಿಕ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಭಾರತದ ಸಮೃದ್ಧ ಸಾಂಸ್ಕೃತಿಕ ಪರಂಪರೆಯನ್ನು ಪ್ರತಿಬಿಂಬಿಸಿತು.
ಇಂತಹ ರಾಷ್ಟ್ರೀಯ ಮಟ್ಟದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಅಂಚೆ ಇಲಾಖೆ ನೌಕರರ ಕಲ್ಯಾಣ, ಸೃಜನಾತ್ಮಕ ಅಭಿವ್ಯಕ್ತಿ ಹಾಗೂ ಸಂಘಟನಾ ಏಕತೆಯನ್ನು ಬಲಪಡಿಸುವ ತನ್ನ ಬದ್ಧತೆಯನ್ನು ಮತ್ತೊಮ್ಮೆ ದೃಢಪಡಿಸಿದೆ.
ಸಮಾರಂಭದಲ್ಲಿ ಕರ್ನಾಟಕ ಅಂಚೆ ವೃತ್ತದ ಸ್ಥಾನಿಕ ನಿರ್ದೇಶಕರಾದ ಶ್ರೀ ಸಂದೇಶ್ ಮಹದೇವಪ್ಪ, ನಿರ್ದೇಶಕರಾದ ವಿ. ತಾರಾ (ಬೆಂಗಳೂರು), ಶ್ರೀ ಹರ್ಷ (ಉತ್ತರ ಕರ್ನಾಟಕ) ಮತ್ತು ಅಂಚೆ ತರಬೇತಿ ಕೇಂದ್ರದ ನಿರ್ದೇಶಕರಾದ ಡಾ. ಆಶಿಶ್ ಸಿಂಗ್ ಠಾಕೂರ್ ಉಪಸ್ಥಿತರಿದ್ದರು.
Source : PIB

